ಚೆನ್ನೈ: ಸಿನಿಮಾ ಪರದೆಯ ಮೇಲಿನ ಸಾಹಸಗಳಿಗಿಂತಲೂ ಮಿಗಿಲಾದ ರಿಯಲ್ ಸಾಹಸವೊಂದು ಈಗ ತಮಿಳುನಾಡು ರಾಜಕಾರಣದಲ್ಲಿ ನಡೆಯುತ್ತಿದೆ. ನಟ ವಿಜಯ್ ಅವರ ʻತಮಿಳಗ ವೆಟ್ರಿ ಕಳಗಂ’ (TVK) ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ ತಲುಪಲು ಕಸರತ್ತು ನಡೆಸುತ್ತಿದ್ದರೆ, ಇತ್ತ ಪ್ರಬಲ ವಿರೋಧ ಪಕ್ಷ ಎಐಎಡಿಎಂಕೆಯಲ್ಲಿ (AIADMK) ಆಂತರಿಕ ಬಂಡಾಯದ ಸ್ಫೋಟವಾಗಿದೆ. ಪಕ್ಷದ 47 ಶಾಸಕರ ಪೈಕಿ 30ಕ್ಕೂ ಹೆಚ್ಚು ಮಂದಿ ಈಗ ವಿಜಯ್ ಅವರ ಕೈ ಹಿಡಿಯಲು ತುದಿಗಾಲಲ್ಲಿ ನಿಂತಿರುವುದು ತಮಿಳುನಾಡು ರಾಜಕೀಯದ ಚಿತ್ರಣವನ್ನೇ ಬದಲಿಸಿದೆ.

ಎಐಎಡಿಎಂಕೆ ಹಿರಿಯ ನಾಯಕ ಸಿ.ವಿ. ಶಣ್ಮುಗಂ ನೇತೃತ್ವದಲ್ಲಿ ಅತೃಪ್ತ ಶಾಸಕರ ಗುಂಪು ಸದ್ದಿಲ್ಲದೆ ಸಭೆ ನಡೆಸುತ್ತಿದೆ. ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಪರೋಕ್ಷ ಎಚ್ಚರಿಕೆ ನೀಡಿರುವ ಈ ಗುಂಪು, ಕೂಡಲೇ ವಿಜಯ್ ಸರ್ಕಾರಕ್ಕೆ ಬೆಂಬಲ ಘೋಷಿಸದಿದ್ದರೆ 30ಕ್ಕೂ ಹೆಚ್ಚು ಶಾಸಕರು ಪಕ್ಷವನ್ನೇ ತೊರೆದು ವಿಜಯ್ ಅವರತ್ತ ಪಾದಬೆಳೆಸುವುದಾಗಿ ಗುಡುಗಿದ್ದಾರೆ. ಇದರಿಂದಾಗಿ ಇಂದು ನಡೆಯಬೇಕಿದ್ದ ಎಐಎಡಿಎಂಕೆಯ ಪ್ರಮುಖ ಶಾಸಕರ ಸಭೆಯೂ ದಿಢೀರ್ ಮುಂದೂಡಲ್ಪಟ್ಟಿದ್ದು, ಪಕ್ಷದಲ್ಲಿ ಉಚ್ಛಾಟನೆ ಅಥವಾ ವಿಲೀನದಂತಹ ಬೆಳವಣಿಗೆಗಳು ನಡೆಯುವ ಮುನ್ಸೂಚನೆ ಸಿಗುತ್ತಿದೆ.

ಕಾಂಗ್ರೆಸ್ ನಡೆಗೆ ಡಿಎಂಕೆ ಕೆಂಡಾಮಂಡಲ
ಇನ್ನೊಂದೆಡೆ, ವಿಜಯ್ ಅವರಿಗೆ ಕಾಂಗ್ರೆಸ್ ಬೆಂಬಲ ಘೋಷಿಸಿರುವುದು ದಶಕಗಳ ಮಿತ್ರ ಪಕ್ಷವಾದ ಡಿಎಂಕೆಯ ನಿದ್ದೆ ಗೆಡಿಸಿದೆ. ಕಾಂಗ್ರೆಸ್‌ನ ಈ ನಡೆಯನ್ನು “ಬೆನ್ನಿಗೆ ಇರಿದ ಚೂರಿ” ಎಂದು ಡಿಎಂಕೆ ವಕ್ತಾರ ಶರವಣನ್ ಅಣ್ಣಾದೊರೈ ಟೀಕಿಸಿದ್ದಾರೆ. ಅಷ್ಟಕ್ಕೂ ಮೊನ್ನೆಯವರೆಗೆ ತಮ್ಮ ಜೊತೆಗಿದ್ದ ಕಾಂಗ್ರೆಸ್, ಈಗ ಇದ್ದಕ್ಕಿದ್ದಂತೆ ವಿಜಯ್ ಪಾಳಯಕ್ಕೆ ಜಿಗಿದಿರುವುದು ಡಿಎಂಕೆಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ “ದಿಢೀರ್ ಪಲ್ಲಟ”ಕ್ಕೆ ಕಾಂಗ್ರೆಸ್ ನೀಡುತ್ತಿರುವ ಕಾರಣಗಳು ಹಾಸ್ಯಾಸ್ಪದವಾಗಿವೆ ಎಂದು ಡಿಎಂಕೆ ಕಿಡಿಕಾರಿದೆ.

ಮುಖ್ಯಮಂತ್ರಿ ಗಾದಿಯತ್ತ ದಳಪತಿ ಪಯಣ:
ಇದೆಲ್ಲದರ ನಡುವೆ, ವಿಜಯ್ ಅವರು ಟಿವಿಕೆ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪೆರಂಬೂರ್ ಮತ್ತು ತಿರುಚ್ಚಿ ಈಸ್ಟ್ ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿರುವ ಅವರು, ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಯಿದೆ. ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಮತ್ತು ವಿಸಿಕೆ ಮುಖ್ಯಸ್ಥ ತಿರುಮಾವಳವನ್ ಅವರಿಗೆ ಈಗಾಗಲೇ ಪತ್ರ ಬರೆದಿರುವ ವಿಜಯ್, ಬಿಕ್ಕಟ್ಟಿನ ನಡುವೆಯೂ ಬಹುಮತ ಸಾಬೀತುಪಡಿಸುವ ವಿಶ್ವಾಸದಲ್ಲಿದ್ದಾರೆ. ಸದ್ಯಕ್ಕೆ ತಮಿಳುನಾಡಿನ ರಾಜಕೀಯ ರಂಗಮಂಚದಲ್ಲಿ ಮುಂದಿನ ಅಂಕ ಅತೀವ ಕುತೂಹಲ ಮೂಡಿಸಿದೆ.