ಮಣಿಪಾಲ: ಸಗ್ರಿ ನೋಳೆಯ ಪೆರಂಪಳ್ಳಿ ರಸ್ತೆಯ ಬದಿಯ ಹಾಡಿಯಲ್ಲಿ ಅಕ್ರಮವಾಗಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ತಂಡವೊಂದರ ಮೇಲೆ ಮಣಿಪಾಲ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ಅವರಿಂದ ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಅಂಬಾಗಿಲಿನ ರುದ್ರಯ್ಯ (37), ಉದ್ಯಾವರದ ಕೃಷ್ಣ ಗಾಣಿಗ (46), ನಿಟ್ಟೂರಿನ ಸಿಂದೂರಪ್ಪ ಹಿರೇಮನಿ (47) ಮತ್ತು 80 ಬಡಗುಬೆಟ್ಟುವಿನ ಶರತ್ ಕುಮಾರ್ (28) ಎಂದು ಗುರುತಿಸಲಾಗಿದೆ. ಈ ನಾಲ್ವರು ಪೆರಂಪಳ್ಳಿ ಮಾರ್ಗದ ನಿರ್ಜನ ಪ್ರದೇಶದ ಹಾಡಿಯಲ್ಲಿ ಕುಳಿತು ʻಅಂದರ್ ಬಾಹರ್’ ಎಂಬ ಜುಗಾರಿ ಆಟದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯ ವೇಳೆ ಪೊಲೀಸರು ಆರೋಪಿಗಳಿಂದ ಒಟ್ಟು 10,800 ರೂ. ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.