ಆರು ವರ್ಷಗಳ ಬಳಿಕ ಸುರತ್ಕಲ್ ಪೊಲೀಸರ ಬಲೆಗೆ ಬಿದ್ದ ಸುಮತಿ ಪ್ರಭು ಹಂತಕ!

ಸುರತ್ಕಲ್: ಸುಮಾರು ಆರು ವರ್ಷಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಕೊಲೆ ಮತ್ತು ದರೋಡೆ ಪ್ರಕರಣದ ಪ್ರಮುಖ ಆರೋಪಿಯನ್ನು ಸುರತ್ಕಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ರಾಜಸ್ಥಾನದ ಭರತ್‌ ಪುರ ಜಿಲ್ಲೆಯ ಭಯಾನ ತಾಲೂಕಿನ ನಿವಾಸಿ ಬಹುದ್ದೂರ್ ಸಿಂಗ್ ಅಲಿಯಾಸ್ ಬುಯ್ಯ ಎಂದು ಗುರುತಿಸಲಾಗಿದೆ.

2014ರ ಫೆಬ್ರವರಿ 8ರಂದು ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ಕಲದ ಸಮೀಪದ ನಿವಾಸಿ ಸುಮತಿ ಪ್ರಭು ಎಂಬವರನ್ನು ಆರೋಪಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಮಹಿಳೆಯ ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದ ದುಷ್ಕರ್ಮಿಗಳು, ಅವರ ಮೈಮೇಲಿದ್ದ ಸುಮಾರು 3.80 ಲಕ್ಷ ರೂಪಾಯಿ ಮೌಲ್ಯದ 192 ಗ್ರಾಂ ತೂಕದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಘಟನೆ ಆ ಸಮಯದಲ್ಲಿ ಕರಾವಳಿ ಭಾಗದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವರಾಮ್ ಮತ್ತು ಶಹನ್ವಾಝ್‌ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಈ ಹಿಂದೆಯೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ, ಮೂರನೇ ಆರೋಪಿ ಬಹುದ್ದೂರ್ ಸಿಂಗ್ ಪೊಲೀಸರಿಗೆ ಸಿಗದೆ ವಿದೇಶ ಅಥವಾ ಪರರಾಜ್ಯಗಳಲ್ಲಿ ಅಡಗಿಕೊಂಡಿದ್ದ ಎನ್ನಲಾಗಿತ್ತು. ಈತನ ಪತ್ತೆಗಾಗಿ ನ್ಯಾಯಾಲಯವು ವಾರಂಟ್ ಕೂಡ ಜಾರಿ ಮಾಡಿತ್ತು.

ಇತ್ತೀಚೆಗೆ ಆರೋಪಿ ಬಹುದ್ದೂರ್ ಸಿಂಗ್ ಹಾಸನ ಜಿಲ್ಲೆಯಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸುರತ್ಕಲ್ ಪೊಲೀಸರು, ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಯಲ್ಲಿ ಆತನನ್ನು ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

error: Content is protected !!