ʻಚರ್ಮುರಿ ಸವಿದ ಮೋದಿ – ಬೀದಿಗೆ ಬಿದ್ದ ದೀದಿʼ: ಮಂಗಳೂರಿನಲ್ಲಿ ಚರ್ಮುರಿ ಹಂಚಿ ವಿಶಿಷ್ಟವಾಗಿ ಗೆಲುವು ಆಚರಿಸಿದ ಬಿಜೆಪಿ!

ಮಂಗಳೂರು: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಧೂಳಿಪಟವಾಗಿ, ಬಿಜೆಪಿ ಸ್ಪಷ್ಟ ಬಹುಮತದತ್ತ ದಾಪುಗಾಲು ಇಡುತ್ತಿದ್ದಂತೆ ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಪಶ್ಚಿಮ ಬಂಗಾಳದ ಅಂಗಡಿಯೊಂದರಲ್ಲಿ ಚರ್ಮುರಿ ಸವಿದಿದ್ದನ್ನು ಮಮತಾ ಬ್ಯಾನರ್ಜಿ ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ಮಂಗಳೂರಿನ ಬಿಜೆಪಿ ಕಾರ್ಯಕರ್ತರು ʻಚರ್ಮುರಿ ತಿಂದ ಮೋದಿ- ಬೀದಿಗೆ ಬಿದ್ದ ದೀದಿ!’ ಎಂಬ ಘೋಷಣೆಗಳನ್ನು ಕೂಗುತ್ತಾ ವಿಶಿಷ್ಟವಾಗಿ ಸಂಭ್ರಮಿಸಿದರು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಈ ಸಂದರ್ಭದಲ್ಲಿ ಸ್ವತಃ ಚರ್ಮುರಿವಾಲನಾಗಿ ಮಿರ್ಚಿ ಮಂಡಕ್ಕಿ ಮತ್ತು ಈರುಳ್ಳಿ ಬಳಸಿ ಖಾರವಾದ ಚರ್ಮುರಿ ತಯಾರಿಸಿ ಕಾರ್ಯಕರ್ತರಿಗೆ ಹಂಚಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸಿ, ಲಡ್ಡು ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು. ಬಿಜೆಪಿ ಮಹಿಳಾ ಕಾರ್ಯಕರ್ತರು ನೃತ್ಯ ಮಾಡುವ ಮೂಲಕ ತಮ್ಮ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಅಧಿಕಾರ ಉಳಿಸಿಕೊಳ್ಳುವುದರ ಜೊತೆಗೆ ಬಂಗಾಳದಲ್ಲಿ ಮಮತಾ ದೀದಿಯವರ ಆಡಳಿತಕ್ಕೆ ಜನರು ಇತಿಹಾಸ ಪ್ರಸಿದ್ಧ ಅಂತ್ಯ ಹಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಮಮತಾ ಅವರ ಆಡಳಿತ ಇಡೀ ದೇಶಕ್ಕೆ ಕಳಂಕ ತರುವಂತಿತ್ತು, ಆದರೆ ಅಲ್ಲಿನ ಜನ ಬಿಜೆಪಿಯೇ ಉತ್ತಮ ಆಡಳಿತ ನೀಡಬಲ್ಲುದು ಎಂದು ನಂಬಿದ್ದಾರೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರು ಚರ್ಮುರಿ ತಿಂದಿದ್ದನ್ನು ಟೀಕಿಸಿದ್ದ ದೀದಿಯವರಿಗೆ ಮಂಗಳೂರಿನ ಈ ಚರ್ಮುರಿ ಹಂಚುವ ಕಾರ್ಯಕ್ರಮದ ಮೂಲಕ ತಕ್ಕ ಉತ್ತರ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಈ ಜಯವು ಸೈದ್ಧಾಂತಿಕ ನಿಲುವು ಮತ್ತು ಮೋದಿಯವರ ಅಭಿವೃದ್ಧಿ ಕಾರ್ಯಗಳಿಗೆ ಸಿಕ್ಕ ಜನಮನ್ನಣೆಯಾಗಿದೆ ಎಂದು ಬಣ್ಣಿಸಿದರು. ಹಿಂದುತ್ವ ಮತ್ತು ಭಾರತದ ಸಂಸ್ಕೃತಿಯ ವಿರುದ್ಧ ನಿಂತಿದ್ದ ಟಿಎಂಸಿ ಹಾಗೂ ತಮಿಳುನಾಡಿನ ಡಿಎಂಕೆಯನ್ನು ಜನರು ತಿರಸ್ಕರಿಸಿದ್ದಾರೆ. ಪಶ್ಚಿಮ ಬಂಗಾಳದ ಕಾರ್ಯಕರ್ತರ ಅದ್ಭುತ ಪರಿಶ್ರಮದಿಂದ ಇಂದು ಅಲ್ಲಿ ಬದಲಾವಣೆ ಸಾಧ್ಯವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

error: Content is protected !!