ಮಂಗಳೂರು: ಕರಾವಳಿಯ ಪ್ರತಿಭೆಗಳು ಸಾಲು ಸಾಲು ಸಾಧನೆಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಮಂಗಳೂರಿನ ಸುರತ್ಕಲ್ ಮೂಲದ ಯುವತಿಯೊಬ್ಬರು ಗ್ಲಾಮರ್ ಲೋಕದಲ್ಲಿ ಮಿಂಚುವ ಮೂಲಕ ಗಮನ ಸೆಳೆದಿದ್ದಾರೆ. ಸುರತ್ಕಲ್‌ನ ಕೃಷ್ಣಾಪುರ ನಿವಾಸಿಯಾದ ಜಾಯ್ಲಿನ್ ಕಟಿನ್ಹಾ ಅವರು ‘ಮಿಸ್ ಐಎಕ್ಸ್‌ಇ 2026’ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಯಾಗಿ ಹೊರಹೊಮ್ಮುವ ಮೂಲಕ ಸಾಧನೆಯ ಶಿಖರಕ್ಕೇರಿದ್ದಾರೆ.

ಜಾಯ್ಲಿನ್ ಅವರ ಈ ಯಶಸ್ಸಿನ ಹಿಂದೆ ದೊಡ್ಡ ಹೋರಾಟವೇ ಅಡಗಿದೆ. ಆಟೋ ರಿಕ್ಷಾ ಚಾಲಕರ ಮಗಳಾಗಿರುವ ಇವರು, ಆರ್ಥಿಕ ಮುಗ್ಗಟ್ಟು ಹಾಗೂ ಬಡತನದ ಸವಾಲುಗಳ ನಡುವೆಯೂ ಧೃತಿಗೆಡದೆ ತಮ್ಮ ಕನಸನ್ನು ಬೆನ್ನತ್ತಿದ್ದರು. ಕಠಿಣ ಪರಿಶ್ರಮವಿದ್ದರೆ ಎಂತಹ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂಬುದನ್ನು ಈ ಯುವತಿ ಸಾಬೀತುಪಡಿಸಿದ್ದಾರೆ. ಈ ಮೂಲಕ ತಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಊರಿಗೇ ಕೀರ್ತಿ ತಂದಿದ್ದಾರೆ.

ಸ್ಪರ್ಧೆಯಲ್ಲಿ ಕೇವಲ ಮುಖ್ಯ ಕಿರೀಟ ಮಾತ್ರವಲ್ಲದೆ, ಜಾಯ್ಲಿನ್ ಅವರು ‘ಬೆಸ್ಟ್ ರ‍್ಯಾಂಪ್ ವಾಕ್ 2026’ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ವೇದಿಕೆಯ ಮೇಲೆ ಇವರು ತೋರಿದ ಆತ್ಮವಿಶ್ವಾಸ ಮತ್ತು ಆಕರ್ಷಕ ನಡಿಗೆ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ಲಾಮರ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಇವರು ಸನ್ನದ್ಧರಾಗಿದ್ದಾರೆ.

ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಜಾಯ್ಲಿನ್ ಕಟಿನ್ಹಾ ಅವರ ಈ ಗೆಲುವಿಗೆ ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸಹಪಾಠಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಶೈಕ್ಷಣಿಕ ಜೀವನದ ಜೊತೆಗೆ ಇಂತಹ ಸಾಧನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
