AI ತಂತ್ರಜ್ಞಾನಕ್ಕೆ ಹೆದರದಿರಿ, ವೃತ್ತಿಪರತೆ ಉಳಿಸಿಕೊಳ್ಳಿ: ಹೊಸ ತಲೆಮಾರಿನ ಪತ್ರಕರ್ತರಿಗೆ ಧನ್ಯಾ ರಾಜೇಂದ್ರನ್ ಕರೆ

ಮಂಗಳೂರು: “ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನವು ಎಂದಿಗೂ ಶತ್ರುವಲ್ಲ. ಕೃತಕ ಬುದ್ಧಿಮತ್ತೆ (AI) ನಮ್ಮ ಕೆಲಸವನ್ನು ಕಸಿದುಕೊಳ್ಳುತ್ತದೆ ಎಂಬ ಆತಂಕ ಪಡುವ ಅಗತ್ಯವಿಲ್ಲ. ನಾವು ನಮ್ಮ ವೃತ್ತಿಪರತೆ ಮತ್ತು ಜನಪರ ಕಾಳಜಿಯನ್ನು ಸರಿಯಾಗಿ ಇರಿಸಿಕೊಂಡರೆ, ತಂತ್ರಜ್ಞಾನವು ನಮಗೆ ಪೂರಕವಾಗಿ ಕೆಲಸ ಮಾಡಲಿದೆ,” ಎಂದು ʻದಿ ನ್ಯೂಸ್ ಮಿನಿಟ್’ನ ಮುಖ್ಯ ಸಂಪಾದಕಿ ಧನ್ಯಾ ರಾಜೇಂದ್ರನ್ ಹೇಳಿದ್ದಾರೆ.

ನಿಟ್ಟೆ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ನಿಟ್ಟೆ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯುನಿಕೇಷನ್ (NICO) ಪನೀರ್ ಕ್ಯಾಂಪಸ್‌ನಲ್ಲಿ “ಪ್ರಚಾರದಿಂದ ಶಾಂತಿಯವರೆಗೆ: ಜಾಗತಿಕ ಸಂಘರ್ಷಗಳಲ್ಲಿ ಮಾಧ್ಯಮದ ಜವಾಬ್ದಾರಿಯ ಮರುಚಿಂತನೆ” ಎಂಬ ಆಶಯದಡಿ ಆಯೋಜಿಸಿದ್ದ ಎರಡು ದಿನಗಳ ಅಂತರರಾಷ್ಟ್ರೀಯ ‘ಮಾಧ್ಯಮ ಸಮಾವೇಶ 2026’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೋದ್ಯಮವು ಎದುರಿಸುತ್ತಿರುವ ನೈತಿಕ ಸವಾಲುಗಳ ಕುರಿತು ಮಾತನಾಡಿದ ಧನ್ಯಾ ರಾಜೇಂದ್ರನ್, ಹೊಸ ತಲೆಮಾರಿನ ಪತ್ರಕರ್ತರು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕು. ಕೃತಕ ಬುದ್ಧಿಮತ್ತೆಯು ಮಾಹಿತಿಯನ್ನು ವೇಗವಾಗಿ ವಿಶ್ಲೇಷಿಸಲು ನೆರವಾಗಬಹುದೇ ಹೊರತು, ಒಬ್ಬ ಪತ್ರಕರ್ತನಲ್ಲಿರುವ ಮಾನವೀಯ ಸಂವೇದನೆ ಮತ್ತು ವಿವೇಚನೆಯನ್ನು ಅದು ಬದಲಿಸಲು ಸಾಧ್ಯವಿಲ್ಲ. ನಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದರೆ ತಂತ್ರಜ್ಞಾನವು ನಮಗೆ ಅನುಕೂಲಕಾರಿಯಾಗಿಯೇ ಇರಲಿದೆ ಎಂದು ಅವರು ಕಿವಿಮಾತು ಹೇಳಿದರು.

ಪತ್ರಕರ್ತರು ಕೇವಲ ಯಾಂತ್ರಿಕವಾಗಿ ಕೆಲಸ ಮಾಡದೆ, ಸಮಾಜಕ್ಕೆ ಬೇಕಾದ ಸತ್ಯವಾದ ಸುದ್ದಿಗಳನ್ನು ನೀಡುವತ್ತ ಗಮನಹರಿಸಬೇಕು. ಜನಪರವಾದ ನಿಲುವನ್ನು ಹೊಂದಿರುವ ಪತ್ರಕರ್ತನಿಗೆ ಯಾವುದೇ ಕಾಲಘಟ್ಟದಲ್ಲೂ ಬೇಡಿಕೆ ಕುಸಿಯುವುದಿಲ್ಲ. ತಂತ್ರಜ್ಞಾನದ ಅಪಾಯಗಳ ಬಗ್ಗೆ ಚಿಂತಿಸುವ ಬದಲು, ಅದನ್ನು ನಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪತ್ರಕರ್ತರು ಕಲಿಯಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಎಂ.ಎಸ್. ಮೂಡಿತ್ತಾಯ ಮಾತನಾಡಿ, “ಮಾಧ್ಯಮವು ಸಮಾಜದ ಕನ್ನಡಿ. ಯುದ್ಧ ಮತ್ತು ಜಾಗತಿಕ ಸಂಘರ್ಷಗಳಂತಹ ಸಂದರ್ಭಗಳಲ್ಲಿ ವರದಿಗಾರಿಕೆ ಮಾಡುವಾಗ ಪತ್ರಕರ್ತರು ಅತ್ಯಂತ ಜಾಗರೂಕರಾಗಿ ಇರಬೇಕು. ಯಾವುದೇ ಪೂರ್ವಗ್ರಹವಿಲ್ಲದೆ ವಸ್ತುನಿಷ್ಠ ಮತ್ತು ಜನಪರ ವರದಿಗಾರಿಕೆಯನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ” ಎಂದರು.

ಅಮೆರಿಕದ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯ ಡಾ. ನಿಖಿಲ್ ಮೊರೊ ಅವರು ದಿಕ್ಸೂಚಿ ಭಾಷಣ ಮಾಡಿದರು. ಜಾಗತಿಕ ಪತ್ರಿಕೋದ್ಯಮವು ಕೇವಲ ದತ್ತಾಂಶ (Data) ಮತ್ತು ಅಂಕಿ-ಅಂಶಗಳಿಗೆ ಸೀಮಿತವಾಗಬಾರದು. ಅದರ ಆಚೆಗಿನ ಮಾನವಪರ ಅಂಶಗಳು ಮತ್ತು ಸಾಮಾಜಿಕ ಪರಿಣಾಮಗಳ ವಿಶ್ಲೇಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್‌ ಕಮ್ಯುನಿಕೇಷನ್ ಮುಖ್ಯಸ್ಥೆ ಡಾ. ಮೌಲ್ಯಾ ಬಾಲಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸಮಾವೇಶದ ಸಂಘಟನಾ ಕಾರ್ಯದರ್ಶಿಯವರು ಆಶಯ ನುಡಿಗಳನ್ನಾಡಿದರು. ಸಂಶೋಧಕಿ ಅಂಜಲಿ ರೈ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಮಾರಂಭದ ನಂತರ ವಿವಿಧ ಗೋಷ್ಠಿಗಳು ನಡೆದವು. ಈ ಗೋಷ್ಠಿಗಳಲ್ಲಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಎ.ಕೆ. ಭಟ್, ಟಿವಿ 9 ಡಿಜಿಟಲ್‌ ಸಂಪಾದಕ ಡಾ. ಭಾಸ್ಕರ್ ಹೆಗ್ಡೆ, ರುದ್ರಂ ಡೈನಾಮಿಕ್ಸ್‌ ಸಹ ನಿರ್ದೇಶಕಿ ಡಾ. ಶ್ರದ್ಧಾ ರೈ , ಸಹಪ್ರಾಧ್ಯಾಪಕಿ ಡಾ. ಅನೀಶಾ  ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಜಾಗತಿಕ ಸಂಘರ್ಷ ಹಾಗೂ ಮಾಧ್ಯಮದ ಪಾತ್ರದ ಕುರಿತು ಬೆಳಕು ಚೆಲ್ಲಿದರು.

error: Content is protected !!