ಮಂಗಳೂರು: ಉರ್ವ ಪೊಲೀಸ್ ಠಾಣೆಯ ಎಎಸ್‌ಐ ಐತ್ತಪ್ಪ ಅವರ ಮೇಲೆ ಹತ್ಯೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುರತ್ಕಲ್ ಕಾನ ನಿವಾಸಿ ಮೊಹಮ್ಮದ್ ನಿಯಾಜ್(27) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ-1 ತ್ವರಿತಗತಿ ನ್ಯಾಯಾಲಯ ಏಳು ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂಪಾಯಿ ದಂಡ ವಿಧಿಸಿದೆ.

ಎಎಸ್‌ಐ ಐತ್ತಪ್ಪ ಅವರು ಸಲ್ಲಿಸಿದ ದೂರಿನ ಪ್ರಕಾರ, ಈ ಘಟನೆಯು 2017ರ ಏಪ್ರಿಲ್ 5 ರಂದು ಬೆಳಗಿನ ಜಾವ 3.20 ರ ಸುಮಾರಿಗೆ ನಗರದ ಲೇಡಿಹಿಲ್ ಸರ್ಕಲ್ ಬಳಿ ಅವರು ಬೈಕ್‌ನಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ನಡೆದಿತ್ತು. ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳಲ್ಲಿ ಸವಾರ ಶಮೀರ್ ಎಂಬಾತ ಐತ್ತಪ್ಪ ಅವರನ್ನು ತುಳುವಿನಲ್ಲಿ ಯಾವ ಪೊಲೀಸ್ ಠಾಣೆ ಎಂದು ವಿಚಾರಿಸಿದ್ದನು. ಐತ್ತಪ್ಪ ಅವರು ಉರ್ವ ಪೊಲೀಸ್ ಠಾಣೆ ಎಂದು ಉತ್ತರಿಸಿದಾಗ, ಶಮೀರ್ ತನ್ನ ಹಿಂದೆ ಕುಳಿತಿದ್ದ ಮೊಹಮ್ಮದ್ ನಿಯಾಜ್‌ಗೆ ಹಲ್ಲೆ ನಡೆಸುವಂತೆ ಸೂಚಿಸಿದ್ದನು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ತಕ್ಷಣವೇ ಇಬ್ಬರೂ ಆರೋಪಿಗಳು ಕಬ್ಬಿಣದ ರಾಡ್‌ನಿಂದ ಐತ್ತಪ್ಪ ಅವರ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದು ಕೊಲೆಗೆ ಯತ್ನಿಸಿದ್ದರು. ಬಳಿಕ ಸಾರ್ವಜನಿಕರು ಸ್ಥಳಕ್ಕೆ ಬರುವುದನ್ನು ಗಮನಿಸಿದ ಆರೋಪಿಗಳು ಬೈಕ್‌ನಲ್ಲಿ ಪರಾರಿಯಾಗಿದ್ದರು. ಅಂದಿನ ಸಹಾಯಕ ಪೊಲೀಸ್ ಕಮಿಷನರ್ ಉದಯ್ ಎಂ. ನಾಯಕ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ಸೋಮವಾರ ಎರಡನೇ ಆರೋಪಿ ಮೊಹಮ್ಮದ್ ನಿಯಾಜ್ ವಿರುದ್ಧ ತೀರ್ಪು ಪ್ರಕಟಿಸಿದ್ದಾರೆ. ಆರೋಪಿಗೆ ಐಪಿಸಿ ಸೆಕ್ಷನ್ 332 ರ ಅಡಿಯಲ್ಲಿ 2 ವರ್ಷ ಶಿಕ್ಷೆ ಮತ್ತು 10,000 ರೂ. ದಂಡ, ಐಪಿಸಿ ಸೆಕ್ಷನ್ 333 ರ ಅಡಿಯಲ್ಲಿ 3 ವರ್ಷ ಶಿಕ್ಷೆ ಮತ್ತು 15,000 ರೂ. ದಂಡ, ಐಪಿಸಿ ಸೆಕ್ಷನ್ 307 (ಹತ್ಯೆ ಯತ್ನ) ರ ಅಡಿಯಲ್ಲಿ 7 ವರ್ಷ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಲಾಗಿದೆ. ಒಟ್ಟು 50,000 ರೂಪಾಯಿ ದಂಡದ ಮೊತ್ತದಲ್ಲಿ 45,000 ರೂಪಾಯಿಗಳನ್ನು ಗಾಯಾಳು ಎಎಸ್‌ಐ ಅವರಿಗೆ ಪರಿಹಾರವಾಗಿ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದ ಮೊದಲ ಆರೋಪಿ ಶಮೀರ್ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದು, ಆತನ ವಿರುದ್ಧದ ವಿಚಾರಣೆ ಬಾಕಿ ಉಳಿದಿದೆ. ಸರ್ಕಾರದ ಪರವಾಗಿ ವಕೀಲರಾದ ಹರಿಶ್ಚಂದ್ರ ಉದ್ಯಾವರ ಮತ್ತು ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.