ಮುಂಬೈ: ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಘಟಕದಲ್ಲಿ ನಡೆದ ಉದ್ಯೋಗಿಗಳ ಕಿರುಕುಳ ಮತ್ತು ಧರ್ಮಾಂತರ ಯತ್ನದ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಸಂತ್ರಸ್ತೆಯ ಧರ್ಮ ಬದಲಿಸಿ, ಹೆಸರು ಬದಲಾಯಿಸಿ ಮಲೇಷ್ಯಾಕ್ಕೆ ಕಳುಹಿಸುವ ದೊಡ್ಡ ಮಟ್ಟದ ಸಂಚು ರೂಪಿಸಲಾಗಿತ್ತು ಎಂಬ ವಿಷಯ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.

ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್, ಸಂತ್ರಸ್ತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಲ್ಲದೆ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಸಂತ್ರಸ್ತೆ ಪರಿಶಿಷ್ಟ ಜಾತಿಗೆ ಸೇರಿದವರಾಗಿರುವುದರಿಂದ, ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ಬುರ್ಖಾ ಮತ್ತು ಇಸ್ಲಾಮಿಕ್ ಪುಸ್ತಕಗಳ ವಶ
ತನಿಖೆಯ ವೇಳೆ ಪೊಲೀಸರು ಸಂತ್ರಸ್ತೆಗೆ ನೀಡಲಾಗಿದ್ದ ಬುರ್ಖಾ ಮತ್ತು ಇಸ್ಲಾಮಿಕ್ ಧಾರ್ಮಿಕ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ನಿದಾ ಖಾನ್ ಸಂತ್ರಸ್ತೆಯ ಮೊಬೈಲ್‌ನಲ್ಲಿ ಇಸ್ಲಾಮಿಕ್ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿದ್ದಲ್ಲದೆ, ಧಾರ್ಮಿಕ ವಿಷಯಗಳಿರುವ ಯೂಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್ ಲಿಂಕ್‌ಗಳನ್ನು ಕಳುಹಿಸಿ ಬ್ರೈನ್ ವಾಶ್ ಮಾಡಲು ಯತ್ನಿಸಿದ್ದಳು ಎನ್ನಲಾಗಿದೆ. ಸಂತ್ರಸ್ತೆಯ ಶೈಕ್ಷಣಿಕ ದಾಖಲೆಗಳನ್ನು ಕಿತ್ತುಕೊಂಡು, ಆಕೆಯ ಹೆಸರನ್ನು ‘ಹನಿಯಾ’ ಎಂದು ಬದಲಿಸಲು ಮಲೇಗಾಂವ್‌ನ ವ್ಯಕ್ತಿಯೊಬ್ಬರ ಸಂಪರ್ಕವನ್ನೂ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಉದ್ಯೋಗದ ನೆಪದಲ್ಲಿ ಸಂತ್ರಸ್ತೆಯನ್ನು ಮಲೇಷ್ಯಾಕ್ಕೆ ಕಳುಹಿಸಿ ಅಲ್ಲಿ ಇಮ್ರಾನ್ ಎಂಬ ವ್ಯಕ್ತಿಯ ಬಳಿ ಕೆಲಸಕ್ಕೆ ಸೇರಿಸುವ ಸಂಚು ರೂಪಿಸಲಾಗಿತ್ತು. ನಿದಾ ಖಾನ್‌ಳ ಸಹೋದರ ಡ್ಯಾನಿಶ್ ಶೇಖ್, ಈಗಾಗಲೇ ಮದುವೆಯಾಗಿದ್ದರೂ ಆ ವಿಷಯ ಮುಚ್ಚಿಟ್ಟು ಸಂತ್ರಸ್ತೆಗೆ ಮದುವೆಯ ಆಮಿಷವೊಡ್ಡಿ ಲೈಂಗಿಕ ಶೋಷಣೆ ಮಾಡಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆಗೆ ಈ ವಿಚಾರ ತಿಳಿಯುತ್ತಿದ್ದಂತೆ ಆಕೆಯನ್ನು ಮಲೇಷ್ಯಾ ಆಫರ್ ನೀಡಿ ಮೌನವಾಗಿಸಲು ಪ್ರಯತ್ನಿಸಲಾಗಿತ್ತು.

ಪ್ರಕರಣದ ಮತ್ತೊಬ್ಬ ಆರೋಪಿ ತೌಸಿಫ್ ಬಿಲಾಲ್ ಅತ್ತಾರ್ ವಿರುದ್ಧವೂ ಲೈಂಗಿಕ ಕಿರುಕುಳ ಮತ್ತು ಬೆದರಿಕೆಯ ಪ್ರಕರಣ ದಾಖಲಾಗಿದೆ. ಸದ್ಯಕ್ಕೆ ನಿದಾ ಖಾನ್ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ತಾನು ಗರ್ಭಿಣಿ ಎಂದು ಹೇಳಿ ಬಂಧನದಿಂದ ತಪ್ಪಿಸಿಕೊಳ್ಳಲು ಆಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ.
ಈವರೆಗೆ ಎಂಟು ಪ್ರತ್ಯೇಕ ದೂರುಗಳು ದಾಖಲಾಗಿದ್ದು, ಟಿಸಿಎಸ್ ಸಂಸ್ಥೆಯು ಈಗಾಗಲೇ ಆರೋಪಿಗಳನ್ನು ಕೆಲಸದಿಂದ ಅಮಾನತುಗೊಳಿಸಿದೆ. ಪ್ರಕರಣದ ಹಿಂದೆ ಹಣಕಾಸಿನ ನೆರವು ಅಥವಾ ದೊಡ್ಡ ಜಾಲವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.