ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿ ಕ್ಯಾಮೆರಾಗಳ ಸಂಪರ್ಕ ಕಡಿತ: ಇಬ್ಬರ ಬಂಧನ

ಬೆಂಗಳೂರು: ಐಪಿಎಲ್ ಪಂದ್ಯಗಳ ವೇಳೆ ಭದ್ರತೆ ನಿರ್ವಹಣೆಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಳವಡಿಸಿದ್ದ ಸುಮಾರು 240 ಸಿಸಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಿದ ಆರೋಪದ ಮೇರೆಗೆ ಖಾಸಗಿ ಸಂಸ್ಥೆಯ ಇಬ್ಬರು ಉದ್ಯೋಗಿಗಳನ್ನು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಐವಿಎಸ್‌ ಡಿಜಿಟಲ್‌ ಸಲ್ಯೂಷನ್‌ ಸಂಸ್ಥೆಯ ನೌಕರ, ಚಿತ್ರದುರ್ಗ ಮೂಲದ ಮಂಜುನಾಥ್ ಮತ್ತು ಉತ್ತರಪ್ರದೇಶ ಮೂಲದ ಅಬ್ದುಲ್‌ ಕಲಾಂ ಬಂಧಿತರು. ಆರೋಪಿಗಳು ಏ.24ರಂದು ಆರ್‌ಸಿಬಿ ಮತ್ತು ಗುಜರಾತ್‌ ಟೈಟಾನ್ಸ್‌ ನಡುವಿನ ಪಂದ್ಯದ ವೇಳೆ 240 ಸಿಸಿ ಕ್ಯಾಮೆರಾಗಳ ಸಂಪರ್ಕವನ್ನು ಕಡಿತ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಸಿ ಕ್ಯಾಮೆರಾಗಳ ನಿರ್ವಹಣೆಯಯನ್ನು ಐ‍ವಿಎಸ್‌ ಡಿಜಿಟಲ್‌ ಸಲ್ಯೂಷನ್‌ ಎಂಬ ಉಪವಿತರಕ ಸಂಸ್ಥೆಗೆ ನೀಡಲಾಗಿತ್ತು. ಆದರೆ, ಕಂಪನಿ ಆರೋಪಿಗಳಿಗೆ ಬಾಕಿ ವೇತನ ಉಳಿಸಿಕೊಂಡಿದೆ. ಅದರಿಂದ ಕೋಪಗೊಂಡು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಆರೋಪಿಗಳು ತಮಗೆ ನೀಡಿದ್ದ ಪಾಸ್‌ಗಳನ್ನು ಬಳಸಿಕೊಂಡು ಕ್ರೀಡಾಂಗಣಕ್ಕೆ ಪ್ರವೇಶಿಸಿ ನೆಟ್‌ವರ್ಕ್ ವಿಡಿಯೋ ರೆಕಾರ್ಡರ್(ಎನ್‌ವಿಆರ್) ಮತ್ತು ಫೈಬರ್ ಸಂಪರ್ಕಗಳನ್ನು ಕಡಿತ ಮಾಡಿದ್ದಾರೆ. ಇದರಿಂದ ಮೈದಾನದ ಸುತ್ತಮುತ್ತಲಿನ ದೃಶ್ಯಾವಳಿಗಳ ಫೀಡ್‌ ಸ್ಥಗಿತವಾಗಿತ್ತು.

error: Content is protected !!