ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಅವಮಾನಕಾರಿ ಕವನ ವಾಚಿಸಿ ಹೇಳಿಕೆ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ನಡೆಗೆ ಬಿಜೆಪಿ ಮುಖಂಡ ಹಾಗೂ ಶಾಸಕ ಡಾ. ವೈ. ಭರತ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಪ್ರಧಾನಿಯವರ ವಿರುದ್ಧ ವೈಯಕ್ತಿಕ ಹಾಗೂ ಅಸಭ್ಯ ಹೇಳಿಕೆಗಳನ್ನು ನೀಡುವುದು ಅತ್ಯಂತ ದುರದೃಷ್ಟಕರ. ಇದು ನಮ್ಮ ರಾಜಕೀಯ ಸಂಸ್ಕೃತಿಗೆ ತಂದ ದೊಡ್ಡ ಧಕ್ಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದ ಡಾ. ಭರತ್ ಶೆಟ್ಟಿ, “ದೇಶದ ಅಭಿವೃದ್ಧಿ ಮತ್ತು ಜನಸೇವೆಗಾಗಿ ಪ್ರಧಾನಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ಆಡಳಿತದಿಂದಾಗಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಹೆಮ್ಮೆಯ ಸ್ಥಾನ ಗಳಿಸಿದೆ. ಮಹಿಳೆಯರ ಹಕ್ಕಿಗಾಗಿ ಸಂಸತ್ತಿನಲ್ಲಿ ಮಸೂದೆ ಮಂಡಿಸಿದವರು ಮೋದಿ. ಅದನ್ನು ಬೆಂಬಲಿಸಲು ಯೋಗ್ಯತೆ ಇಲ್ಲದ ಕಾಂಗ್ರೆಸ್ಸಿಗರು ಇಂದು ಮೋದಿ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಿರುವುದು ಅಸಭ್ಯ ರಾಜಕೀಯದ ಪರಮಾವಧಿ” ಎಂದು ಟೀಕಿಸಿದರು.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಸಚಿವ ಶಿವರಾಜ್ ತಂಗಡಗಿ ಅವರು ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಇಂತಹ ತಂತ್ರಗಳು ಫಲಿಸುವುದಿಲ್ಲ ಎಂದು ಹೇಳಿದರು. ಸರ್ಕಾರದ ಆಡಳಿತಾತ್ಮಕ ಹಿನ್ನಡೆಯಿಂದ ಜನರನ್ನು ದಿಕ್ಕು ತಪ್ಪಿಸಲು ಸಚಿವರು ಇಂತಹ ನೀಚ ಮಟ್ಟದ ದಾಳಿ ನಡೆಸುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.