ಮಂಗಳೂರು: ನಗರದ ಮಿಲಾಗ್ರಿಸ್ ಕಾಲೇಜು, ಐಸಿವೈಎಂ (ICYM) ಮಂಗಳೂರು ಧರ್ಮಪ್ರಾಂತ್ಯ ಹಾಗೂ ಮಂಗಳೂರು ರನ್ನರ್ಸ್ ಕ್ಲಬ್ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರ ಮಟ್ಟದ ಬೃಹತ್ ಮ್ಯಾರಥಾನ್ “Apex Run 2026” ಅನ್ನು ಇದೇ ಬರುವ ಮೇ 10ರಂದು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 5:00 ಗಂಟೆಗೆ ಮಿಲಾಗ್ರಿಸ್ ಕಾಲೇಜು ಆವರಣದಲ್ಲಿ ಓಟಕ್ಕೆ ಚಾಲನೆ ದೊರೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಅಲ್ವಿನ್ ಸೆರಾವೊ ತಿಳಿಸಿದರು.


ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ದೈಹಿಕ ಕ್ಷಮತೆ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಯುವಜನರಲ್ಲಿ ಸಮುದಾಯದ ಒಗ್ಗಟ್ಟನ್ನು ಉತ್ತೇಜಿಸುವ ಉದ್ದೇಶದಿಂದ ಈ ಓಟವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 176 ವರ್ಷಗಳ ಸುದೀರ್ಘ ಇತಿಹಾಸವಿರುವ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಯು ಗುಣಮಟ್ಟದ ಶಿಕ್ಷಣದ ಜೊತೆಗೆ ಸಮಾಜ ಸೇವೆಯಲ್ಲಿ ಸಕ್ರಿಯವಾಗಿದ್ದು, ಈ ಮ್ಯಾರಥಾನ್‌ನಲ್ಲಿ ಸುಮಾರು 2500 ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ವಿವರಿಸಿದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಈ ಮ್ಯಾರಥಾನ್ ಅನ್ನು 3 ಕಿ.ಮೀ, 5 ಕಿ.ಮೀ ಮತ್ತು 10 ಕಿ.ಮೀ ಎಂಬ ಮೂರು ವಿಭಾಗಗಳಲ್ಲಿ ನಡೆಸಲಾಗುತ್ತಿದೆ. 3 ಕಿ.ಮೀ ಓಟಕ್ಕೆ ರೂ. 250, 5 ಕಿ.ಮೀ ಗೆ ರೂ. 350 ಮತ್ತು 10 ಕಿ.ಮೀ ಗೆ ರೂ. 450 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ. 5 ಮತ್ತು 10 ಕಿ.ಮೀ ಓಟದ ವಿಜೇತರಿಗೆ ಪ್ರಥಮ ಬಹುಮಾನವಾಗಿ ರೂ. 5000 ಹಾಗೂ ದ್ವಿತೀಯ ಬಹುಮಾನವಾಗಿ ರೂ. 3000 ನಗದಿನೊಂದಿಗೆ ಟ್ರೋಫಿ ನೀಡಲಾಗುವುದು. ಭಾಗವಹಿಸುವ ಪ್ರತಿಯೊಬ್ಬರಿಗೂ ಟಿ-ಶರ್ಟ್, ಫಿನಿಶರ್ ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಗುವುದು.

ಕೇವಲ ಓಟ ಮಾತ್ರವಲ್ಲದೆ, ಈ ಕಾರ್ಯಕ್ರಮದ ಪ್ರಚಾರಕ್ಕಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ರೀಲ್ಸ್‌ಗೆ ರೂ. 10,000 ನಗದು ಬಹುಮಾನವನ್ನು ಘೋಷಿಸಲಾಗಿದೆ. ಅಲ್ಲದೆ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಂಸ್ಥೆ ಅಥವಾ ಸಂಘಟನೆಗೆ ವಿಶೇಷ ಟ್ರೋಫಿ ನೀಡಿ ಗೌರವಿಸಲಾಗುವುದು. ಸ್ಪರ್ಧಾಳುಗಳ ಸುರಕ್ಷತೆಗಾಗಿ ಮಾರ್ಗದುದ್ದಕ್ಕೂ ನೀರಿನ ವ್ಯವಸ್ಥೆ, ವೈದ್ಯಕೀಯ ನೆರವು ಹಾಗೂ ಆಂಬ್ಯುಲೆನ್ಸ್ ಸೇವೆಯನ್ನು ಕಲ್ಪಿಸಲಾಗಿದೆ. “ಮಿತಿಗಳನ್ನು ಮೀರಿ ಓಡಿ” (Run Beyond Limits) ಎಂಬ ಸಂದೇಶದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಆಸಕ್ತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಈಗಾಗಲೇ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಮರಿಯ ಡಿʼಸೋಜ, ಅಲ್ವಿನ್, ಕ್ಲೇಡ್ ಹಾಗೂ ಮಮತಾ ಶೆಟ್ಟಿ ಉಪಸ್ಥಿತರಿದ್ದರು.