ಸ್ನೇಹಿತರೊಂದಿಗೆ ನದಿಗೆ ಸ್ನಾನಕ್ಕೆ ಹೋದ ಯುವಕ ನಾಪತ್ತೆ!

ಕಡಬ: ಸ್ನಾನಕ್ಕೆಂದು ನದಿಗೆ ಇಳಿದ ಯುವಕನೋರ್ವ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿರುವ ಘಟನೆ ಸೋಮವಾರ(ಏ.27) ಸಂಜೆ ಕಡಬ ಐತೂರು ಗ್ರಾಮದ ಕೋರಿಯಾರ್ ಪ್ರದೇಶದಲ್ಲಿ ಸಂಭವಿಸಿದೆ.

ರಕ್ಷಿತ್ (26) ನಾಪತ್ತೆಯಾದ ಯುವಕ.

ಮೂಲತಃ ಮರ್ದಾಳ ನಿವಾಸಿಯಾಗಿರುವ ರಕ್ಷಿತ್ ಕುಟುಂಬದವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಸೋಮವಾರ ಸಂಜೆ ತನ್ನ ಸ್ನೇಹಿತರೊಂದಿಗೆ ಕೋರಿಯಾರ್ ಸಮೀಪದ ‘ಅರಬ್ಬಿ ತೋಡು’ ಪ್ರದೇಶಕ್ಕೆ ಸ್ನಾನಕ್ಕಾಗಿ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಈಜಲು ತಿಳಿದಿದ್ದರೂ ನೀರಿನ ಸೆಳೆತ ಅಥವಾ ಆಳದ ಅಂದಾಜು ತಪ್ಪಿದ್ದರಿಂದ ರಕ್ಷಿತ್ ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆ ನಡೆದ ತಕ್ಷಣ ಸ್ನೇಹಿತರು ಹಾಗೂ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಡಬ ಪೊಲೀಸರು ಹಾಗೂ ಪುತ್ತೂರಿನಿಂದ ಅಗ್ನಿಶಾಮಕ ದಳದ ಸಿಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸೂಕ್ತ ರಸ್ತೆ ಸಂಪರ್ಕ ಇಲ್ಲದೆ ಇರುವುದರಿಂದ ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ವಾಹನ ತೆರಳಲು ಸಾಧ್ಯವಾಗಿಲ್ಲ. ನೀರಿನಲ್ಲಿ ಹುಡುಕಾಟ ನಡೆಸುವುದಕ್ಕಾಗಿ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡದವರ ನೆರವು ಪಡೆಯಲು ನಿರ್ಧರಿಸಲಾಗಿದೆ.

error: Content is protected !!