ಗ್ಯಾರಂಟಿ ಯೋಜನೆಗೆ ‘ಕುಡುಕರೇ’ ಟಾರ್ಗೆಟ್: ಕಿಕ್ ಬೇಕಂದ್ರೆ ಕಾಸು ಜಾಸ್ತಿ ಕೊಡಿ!

ಬೆಂಗಳೂರು: ರಾಜ್ಯದಲ್ಲಿ ಮದ್ಯಪ್ರಿಯರ ಸ್ಥಿತಿ ಹೇಗಾಗಿದೆ ಎಂದರೆ, ಬಾರ್‌ಗೆ ಹೋಗುವ ಮುನ್ನ ಜೇಬಿಗೆ ನಮಸ್ಕಾರ ಮಾಡಿ ಹೋಗುವಂತಾಗಿದೆ! ಸರ್ಕಾರ ಪ್ರತಿ ಬಾರಿ ಬೆಲೆ ಏರಿಸಿದಾಗಲೂ “ಇದೇ ಕೊನೆ” ಅಂದುಕೊಳ್ಳುವ ಕುಡುಕರಿಗೆ ಈಗ ಐದನೇ ಬಾರಿಗೆ ಶಾಕ್ ನೀಡಲಾಗಿದೆ.

“ನಾವು ಕುಡಿದರೆ ಅಲ್ವಾ ಸರ್ಕಾರಕ್ಕೆ ಆದಾಯ ಬರೋದು?” ಎಂದು ಬೀಗುತ್ತಿದ್ದ ಎಣ್ಣೆ ಪ್ರಿಯರಿಗೆ ಈಗ ಸರ್ಕಾರ ‘ಎಐಬಿ’ ಎಂಬ ಹೊಸ ಅಸ್ತ್ರದ ಮೂಲಕ ಚಳಿ ಬಿಡಿಸಿದೆ. ಮದ್ಯದಲ್ಲಿ ಆಲ್ಕೋಹಾಲ್ ಹೆಚ್ಚಿದಷ್ಟೂ ರೇಟು ಜಾಸ್ತಿ ಅಂತೆ! ಅಂದರೆ, ಕಿಕ್ ಬೇಕು ಅಂದ್ರೆ ಎಕ್ಸ್ಟ್ರಾ ಕಾಸು ಕೊಡಲೇಬೇಕು. ಪ್ರೀಮಿಯಂ ಮದ್ಯದ ರೇಟು ಇಳಿಕೆಯಾಗಬಹುದು ಎಂಬ ಸುದ್ದಿ ಕೇಳಿ, ಕ್ವಾರ್ಟರ್ ಕುಡಿಯುವವನು “ನಾನು ನಾಳೆಯಿಂದ ಸ್ಕಾಚ್ ಕುಡಿತೀನಿ” ಎಂದು ಕನಸು ಕಾಣುವಂತಾಗಿದೆ. ಒಟ್ಟಿನಲ್ಲಿ, ಹೆಂಡತಿಯ ಕೈಯಲ್ಲಿ ಬೈಗುಳ ತಿಂದು, ಈಗ ಸರ್ಕಾರದ ಕೈಯಲ್ಲಿ ಜೇಬು ಸುಟ್ಟುಕೊಳ್ಳುವ ಪರಿಸ್ಥಿತಿ ಕುಡುಕದ್ದಾಗಿದೆ!

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ವಿಷಯಕ್ಕೆ ಬಂದರೆ, ಸರ್ಕಾರದ ಈ ನಡೆಯು ರಾಜ್ಯದ ಕೆಳ ಮತ್ತು ಮಧ್ಯಮ ವರ್ಗದ ಜನರ ಮೇಲೆ ನೇರ ಪರಿಣಾಮ ಬೀರಲಿದೆ. ಅಬಕಾರಿ ಸುಂಕವನ್ನು ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ (Alcohol-in-Beverage) ಪರಿಷ್ಕರಿಸುತ್ತಿರುವುದು ವೈಜ್ಞಾನಿಕ ಎಂದು ಕಂಡರೂ, ಪ್ರಾಯೋಗಿಕವಾಗಿ ಇದು ಸಾಮಾನ್ಯ ಬ್ರ್ಯಾಂಡ್‌ಗಳ ಬೆಲೆಯನ್ನು ಶೇ.20ರಷ್ಟು ಹೆಚ್ಚಿಸಲಿದೆ. ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಏರಿಕೆಯಾಗುವುದರಿಂದ, ದಿನಗೂಲಿ ನೌಕರರು ಮತ್ತು ಶ್ರಮಿಕ ವರ್ಗದವರು ತಮ್ಮ ಆದಾಯದ ಬಹುಪಾಲು ಪಾಲನ್ನು ವ್ಯಸನಕ್ಕೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಕೇವಲ ವೈಯಕ್ತಿಕ ಖರ್ಚಲ್ಲ, ಬದಲಿಗೆ ಕುಟುಂಬಗಳ ಆರ್ಥಿಕ ಶಿಸ್ತಿನ ಮೇಲಿನ ದಾಳಿಯೂ ಹೌದು.

ಅಭಿವೃದ್ಧಿಯೋ ಅಥವಾ ತೆರಿಗೆಯ ಸುಲಿಗೆಯೋ?
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಪನ್ಮೂಲ ಕ್ರೋಢೀಕರಿಸಲು ಮದ್ಯವನ್ನೇ ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಕ್ಕೆ ಈ ಹೊಸ ನೀತಿ ಪುಷ್ಟಿ ನೀಡುತ್ತಿದೆ. ಅಬಕಾರಿ ಇಲಾಖೆಯು ರಾಜ್ಯದ ಶೇ.80ರಷ್ಟು ಆದಾಯ ಬರುವ ಜನಪ್ರಿಯ ಸ್ಲ್ಯಾಬ್‌ಗಳ ಮೇಲೆ ₹15 ರಿಂದ ₹25 ರವರೆಗೆ ಕ್ವಾರ್ಟರ್‌ಗೆ ಹೆಚ್ಚಳ ಮಾಡುತ್ತಿರುವುದು ವ್ಯಾಪಾರಿಗಳ ಮತ್ತು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಚಾರ್ಜ್ ಸೇರಿದರೆ ಒಂದು ಫುಲ್ ಬಾಟಲ್ ಬೆಲೆ ₹100ರವರೆಗೂ ಏರಿಕೆಯಾಗಲಿದೆ. ಈ ಬೆಲೆ ಏರಿಕೆಯು ಅಕ್ರಮ ಮದ್ಯ ಮಾರಾಟ ಅಥವಾ ಪಕ್ಕದ ರಾಜ್ಯಗಳಿಂದ ಮದ್ಯ ಸಾಗಣೆಗೆ ಪ್ರೇರಣೆ ನೀಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

error: Content is protected !!