ಲೋಕಲ್ ಟು ಗ್ಲೋಬಲ್: ‘ಕೆನರಾ ಎಂಜಿನಿಯರಿಂಗ್, ಕೈಗಾರಿಕಾ ಮತ್ತು ತಂತ್ರಜ್ಞಾನ ಪ್ರದರ್ಶನ’ಕ್ಕೆ ಚಾಲನೆ
ಮಂಗಳೂರು: ಕರಾವಳಿ ಕರ್ನಾಟಕದ ಕೈಗಾರಿಕಾ ಇತಿಹಾಸದಲ್ಲೇ ಅತೀ ದೊಡ್ಡದಾದ ‘ಕೆನರಾ ಎಂಜಿನಿಯರಿಂಗ್, ಕೈಗಾರಿಕಾ ಮತ್ತು ತಂತ್ರಜ್ಞಾನ ಪ್ರದರ್ಶನ 2026’ (KEIT EXPO) ಮೇ 01, 02 ಮತ್ತು 03 ರಂದು ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 07:00 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದ್ದು, ಈ ಪ್ರದರ್ಶನಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಕೆನರಾ ಕೈಗಾರಿಕಾ ಸಂಘದ ಅಧ್ಯಕ್ಷ ಎಂ.ಡಿ. ಪೂಜಾರಿ ತಿಳಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ ಕೆಲವು ವರ್ಷಗಳಿಂದ ಜಾಗತಿಕ ಪೂರೈಕೆ ಸರಪಳಿಯು (Supply Chain) ಪ್ರಾಕೃತಿಕ ವಿಕೋಪಗಳು, ಸಾಂಕ್ರಾಮಿಕ ರೋಗಗಳು ಮತ್ತು ರಾಜಕೀಯ ಅಸ್ಥಿರತೆಯಿಂದಾಗಿ ತೀವ್ರವಾಗಿ ವ್ಯತ್ಯಯಗೊಂಡಿದೆ. ಇದರಿಂದಾಗಿ ಆಹಾರ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ವಿಶ್ವದ ಸುಮಾರು ಮೂರನೇ ಒಂದು ಭಾಗದಷ್ಟು ಜನರು ಬಡತನದ ಆತಂಕ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ಪೂರೈಕೆ ಸರಪಳಿಯ ಅಗತ್ಯವನ್ನು ಮನಗಂಡು ಈ ಎಕ್ಸ್‌ಪೋ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

ಜಾಗತಿಕ ಮಟ್ಟದಲ್ಲಿ ಉದ್ಯಮಗಳು ಈಗ ಒಂದೇ ಕಡೆ ಕೇಂದ್ರೀಕೃತವಾಗುವ ಬದಲು ಬೇರೆ ಬೇರೆ ದೇಶಗಳಿಗೆ ವಿಸ್ತರಿಸುವ ‘ಚೀನಾ +1’ ತಂತ್ರವನ್ನು ಅಳವಡಿಸಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಭಾರತದಂತಹ ದೇಶಗಳಿಗೆ ಹೆಚ್ಚಿನ ಅವಕಾಶಗಳಿವೆ. ನಮ್ಮ ದೇಶದ ಉತ್ಪಾದನಾ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಲು ಈ ‘ಮೆಗಾ ಟೆಕ್ನಾಲಜಿ ಎಕ್ಸ್‌ಪೋ’ ವೇದಿಕೆಯಾಗಲಿದೆ. ಈ ಮೂಲಕ ಸ್ಥಳೀಯ ಉದ್ಯಮಿಗಳು ಜಾಗತಿಕ ಮಾರುಕಟ್ಟೆಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ನವೀನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ಕರಾವಳಿ ಪ್ರದೇಶವು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬೆಳೆಯುತ್ತಿದ್ದು, ಇಲ್ಲಿನ ಐಸ್‌ಕ್ರೀಮ್ ಉದ್ಯಮವು ‘ಐಸ್‌ಕ್ರೀಮ್ ಕ್ಯಾಪಿಟಲ್ ಆಫ್ ದಿ ಕಂಟ್ರಿ’ ಎಂಬ ಹೆಸರು ಗಳಿಸಿದೆ. ಅದೇ ರೀತಿ ಗೋಡಂಬಿ (Cashew) ಸಂಸ್ಕರಣಾ ಉದ್ಯಮವು ‘ಮಂಗಳೂರು ಕಾಜು’ ಎಂಬ ವಿಶಿಷ್ಟ ರುಚಿಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಎಲ್ಲ ಸಾಧನೆಗಳನ್ನು ಜಗತ್ತಿಗೆ ಪರಿಚಯಿಸಲು ಸುಮಾರು 120ಕ್ಕೂ ಹೆಚ್ಚು ಉದ್ಯಮಗಳು ಈ ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ತಾಂತ್ರಿಕ ಪ್ರಗತಿಯನ್ನು ಪ್ರದರ್ಶಿಸಲಿವೆ ಎಂದು ಎಂಡಿ ಪೂಜಾರಿ ವಿವರಿಸಿದರು.

ಕರ್ನಾಟಕ ಸರ್ಕಾರವು ಇತ್ತೀಚೆಗೆ ಸುಮಾರು 5568.9 ಎಕರೆ ವಿಸ್ತೀರ್ಣದ ಬೈಕಂಪಾಡಿ ಉದ್ಯಮ ಪ್ರದೇಶವನ್ನು ‘ವಿಶೇಷ ಹೂಡಿಕೆ ವಲಯ’ವಾಗಿ ಘೋಷಿಸಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಈ ನಿರ್ಧಾರದಿಂದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮತ್ತು ಹೊಸ ಹೂಡಿಕೆದಾರರನ್ನು ಆಕರ್ಷಿಸಲು ಹೆಚ್ಚಿನ ಬಲ ಸಿಗಲಿದೆ. ಇದು ಈಗಾಗಲೇ ಅಸ್ತಿತ್ವದಲ್ಲಿರುವ ಉದ್ಯಮಗಳ ವೃದ್ಧಿಗೂ ಪೂರಕವಾಗಲಿದೆ ಎಂದು ಪೂಜಾರಿ ಆಶಯ ವ್ಯಕ್ತಪಡಿಸಿದರು.

ಉನ್ನತ ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಅಗತ್ಯವಿರುವ ಪ್ರತಿಭಾವಂತ ಯುವ ಮಾನವ ಸಂಪನ್ಮೂಲವನ್ನು ಹೊಂದಿರುವ ಈ ಪ್ರದೇಶದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಅವರು ಈ ಸಂದರ್ಭದಲ್ಲಿ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎ. ಇಕ್ಬಾಲ್, ಕಾರ್ಯದರ್ಶಿ ರೋಷನ್ ಬಾಳಿಗ ಬಿ., ಜಂಟಿ ಕಾರ್ಯದರ್ಶಿ ರಾಮಚಂದ್ರ ಮತ್ತು ಕೋಶಾಧಿಕಾರಿ ಪುಷ್ಪರಾಜ್ ಉಪಸ್ಥಿತರಿದ್ದರು.