11 ನೇ ವರ್ಷದ ಪಟ್ಲ ಸಂಭ್ರಮ 2026: *ಮೇ 30 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಕಾರ್ಯಕ್ರಮ- ಡಾ| ಆಳ್ವರಿಗೆ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ, ಪೊಲ್ಯರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ 11 ನೇ ವರ್ಷದ *ಪಟ್ಲ ಸಂಭ್ರಮ 2026 ಕಾರ್ಯಕ್ರಮ ಮೇ 30 ಶನಿವಾರ ಅಡ್ಯಾರ್ ಬಳಿಯ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ಭಾಗವತ ಪಟ್ಲ ಸತೀಶ್ ಶೆಟ್ಟಿ ಮಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ‌ ನೀಡಿದರು.

ಉದ್ಘಾಟನೆ
ಯಕ್ಷಧ್ರುವ ಪಟ್ಲ ಸಂಭ್ರಮ 2026 ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮಧರ್ಶಿಗಳಾದ ಡಾ ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮಗಳ‌ ವಿವರ
ಬೆಳಿಗ್ಗೆ 8.30 ರಿಂದ 9 ರ ತನಕ ಚೌಕಿ ಪೂಜೆ ಮತ್ತು ಅಬ್ಬರ ತಾಳ, 9 ರಿಂದ 11 ರ ವರೆಗೆ ಭರತ ನಾಟ್ಯ ಪ್ರದರ್ಶನ, 11 ರಿಂದ 1.30 ರ ವರೆಗೆ ಸಭಾ ಕಾರ್ಯಕ್ರಮ, ಮಧ್ಯಾಹ್ನ 1.30 ರಿಂದ 2 ರ ವರೆಗೆ ನಾಗವೃಜ ಕ್ಷೇತ್ರ ಪಾವಂಜೆಯ ಶ್ರೀ ವಾಣಿ ಶಾಲಾ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, ಮಧ್ಯಾಹ್ನ 2ರಿಂದ 3.30 ರ ವರೆಗೆ ಮಹಿಳಾ ಯಕ್ಷಗಾನ, ಸಂಜೆ 3.30 ರಿಂದ 5 ರವರೆಗೆ ಯಕ್ಷಗಾನ ಹಾಸ್ಯ ವೈಭವ ನಡೆಯಲಿದೆ.

ಪ್ರಶಸ್ತಿ
ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಧಾನ ಸಂಚಾಲಕರಾದ, ಉದ್ಯಮಿ ಶಶಿಧರ ಬಿ ಶೆಟ್ಟಿ ಬರೋಡಾ ಅವರ ಮಾರ್ಗದರ್ಶನದಲ್ಲಿ 11 ನೇ ವರ್ಷದ ಪಟ್ಲ ಸಂಭ್ರಮದಲ್ಲಿ ಡಾ ಎಂ ಮೋಹನ್ ಆಳ್ವ ಅವರಿಗೆ 2026 ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

2026 ರ ಸಾಲಿನ ಪಟ್ಲ ಪ್ರಶಸ್ತಿಯನ್ನು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ ನೀಡಲಾಗುವುದು.

ಸಭಾ ಕಾರ್ಯಕ್ರಮ
ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದರು, ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಮುಂಬೈ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಸದಾಶಿವ ಶೆಟ್ಟಿ ಕನ್ಯಾನ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಆರ್ ಜಿ ಗ್ರೂಪ್ ಕಂಪನೀಸ್ ಬೆಂಗಳೂರು ಇದರ ಅಧ್ಯಕ್ಷರು ಹಾಗೂ ನಿರ್ದೇಶಕರಾದ ಡಾ ಕೆ ಪ್ರಕಾಶ್ ಶೆಟ್ಟಿ ಸಮಾರಭವನ್ನು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಗೌರವಾನ್ವಿತರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ 11 ವರ್ಷಗಳಲ್ಲಿ 16 ಕೋಟಿ ಮೌಲ್ಯದ ಸೇವಾ ಕಾರ್ಯಗಳನ್ನು ನೆರವೇರಿಸಿದೆ.

11 ವರ್ಷಗಳಲ್ಲಿ ಟ್ರಸ್ಟಿನ ಆಶ್ರಯದಲ್ಲಿ ಅನುಷ್ಠಾನಗೊಳಿಸಿದ ಸೇವಾ ಕಾರ್ಯಕ್ರಮಗಳು*
*ಪಟ್ಲ ಪ್ರಶಸ್ತಿ:* ಖ್ಯಾತ 8 ಕಲಾವಿದರಿಗೆ ತಲಾ 1 ಲಕ್ಷ ರೂ. ನಗದು, ಬೆಳ್ಳಿ ಪದಕ ಹಾಗೂ ಸನ್ಮಾನ ಫಲಕ ನೀಡಿ ವಿಶೇಷವಾಗಿ ಗೌರವಿಸಲಾಗಿದೆ.

ಪಟ್ಲ ಯಕ್ಷಾಶ್ರಯ:
56 ಮನೆಗಳನ್ನು ನಿರ್ಮಿಸಿ ಕಲಾವಿದರಿಗೆ ಹಸ್ತಾಂತರಿಸಲಾಗಿದ್ದು, 60 ಮನೆಗಳು ಅಂತಿಮ ಹಂತದ ನಿರ್ಮಾಣದಲ್ಲಿವೆ.

ಗೃಹ ದುರಸ್ತಿ ನೆರವು:
210 ಕಲಾವಿದರಿಗೆ ತಲಾ 25,000 ಸಾವಿರ ರೂಪಾಯಿ ಮನೆ ದುರಸ್ತಿ ಸಹಾಯಧನ ವಿತರಿಸಲಾಗಿದೆ.

ಗೌರವ ಧನ ಸಹಾಯ:
ತೀರಾ ಅಶಕ್ತರಾದ 175 ಕಲಾವಿದರಿಗೆ ತಲಾ 50,000 ಸಾವಿರ ರೂಪಾಯಿ ನೀಡಲಾಗಿದೆ.

ಸನ್ಮಾನ ಸಹಿತ ಗೌರವ ಧನ:
ವಿವಿಧ ಪ್ರಾದೇಶಿಕ ಘಟಕಗಳ ಮೂಲಕ 530 ಕಲಾವಿದರನ್ನು ಸನ್ಮಾನಿಸಿ ಗೌರವ ಧನ ನೀಡಲಾಗಿದೆ.

ಅಪಘಾತ ವಿಮಾ ಯೋಜನೆ : ಪ್ರತಿವರ್ಷ ಸುಮಾರು 2,450 ಕಲಾವಿದರಿಗೆ 60,000 ಸಾವಿರ ವರೆಗೆ ಚಿಕಿತ್ಸಾ ವೆಚ್ಚ ಹಾಗೂ ಆಕಸ್ಮಿಕ ಮರಣದ ಸಂದರ್ಭದಲ್ಲಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.

ಯಕ್ಷಧ್ರುವ ಪಟ್ಲ ಫೌಂಡೇಶನ್ ಡೇ
ಯಕ್ಷಧ್ರುವ ಪಟ್ಲ ಫೌಂಡೇಶನ್ ಭಾರತೀಯ ಯಕ್ಷಗಾನ ಕಲೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರಗೊಳಿಸುವ ನಿಟ್ಟಿನಲ್ಲಿ ಅಮೇರಿಕಾದಲ್ಲಿ ಐತಿಹಾಸಿಕ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ.

ಫೀನಿಕ್ಸ್‌ನ ಪುತ್ತಿಗೆ ಮಠದ ಶ್ರೀ ವೆಂಕಟಕೃಷ್ಣ ದೇವಸ್ಥಾನದಲ್ಲಿ ಜುಲೈ 27, 2024ರಂದು ಅರ್ಚಕ ಕಿರಣ್ ರಾವ್ ಅವರ ನೇತೃತ್ವದಲ್ಲಿ ನಡೆದ ಯಕ್ಷಗಾನ ಪ್ರದರ್ಶನ ಹಾಗೂ ಫೌಂಡೇಶನ್‌ನ ಸೇವಾ ಕಾರ್ಯಗಳಿಂದ ಪ್ರಭಾವಿತರಾದ ಅರಿಜೋನಾದ ಮೇಯರ್ ಕೋರೆ ವುಡ್ಸ್ ಅವರು ಜುಲೈ 27ನ್ನು “Yakshadhruva Patla Foundation Day” ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

ಇದೇ ರೀತಿ, ಮಿಲ್ವಾಕೀ ಕನ್ನಡ ಸಂಘದ ಆಶ್ರಯದಲ್ಲಿ ಬ್ರೂಕ್ ಫೀಲ್ಡ್ ನಗರದಲ್ಲಿ ಅಗಸ್ಟ್ 18, 2024ರಂದು ಮತ್ತೊಂದು ಗೌರವ ಸಂದಿತು – ಅಲ್ಲಿನ ಮೇಯರ್ ಸ್ಟೀವನ್ ವಿ. ಪೋಂಟೊ ಅವರು ಅಗಸ್ಟ್ 18ನ್ನು ‘Yakshadhruva Patla Foundation Day” ಎಂದು – ಘೋಷಿಸುವ ಮೂಲಕ ಫೌಂಡೇಶನ್‌ನ ಕೊಡುಗೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ ಗೌರವಿಸಿದ್ದಾರೆ.

*ಯಕ್ಷಧ್ರುವ ಯಕ್ಷ ಶಿಕ್ಷಣ*
ಯಕ್ಷಗಾನ ಲೋಕಕ್ಕೆ ಹೊಸ ಚೇತನ ತುಂಬುವ, ನವೀನ ಕಲಾವಿದರನ್ನು ರೂಪಿಸುವ, ಕಲಾಸಕ್ತಿಯನ್ನು ಜಾಗೃತಗೊಳಿಸುವ ಮತ್ತು ಸುಸಂಸ್ಕೃತ ಪ್ರೇಕ್ಷಕ ಸಮುದಾಯವನ್ನು ನಿರ್ಮಿಸುವ ಒಂದು ಐತಿಹಾಸಿಕ ಮತ್ತು ಪ್ರಗತಿಯುತ ಹೆಜ್ಜೆಯೇ – ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆ. ಹಿರಿಯ ಕಲಾವಿದರ ಅನುಭವಸಿದ್ದ ಮಾರ್ಗದರ್ಶನದ ಮೇರೆಗೆ, ಈ ಕಾಲಘಟ್ಟದಲ್ಲಿ ಒಟ್ಟು 51 ಯಕ್ಷಗಾನ ಶಿಕ್ಷಕರು ರಾಜ್ಯದ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಉತ್ಸಾಹದಿಂದ ಯಕ್ಷಶಿಕ್ಷಣದ ತರಗತಿಗಳನ್ನು ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 89 ಶಾಲೆಗಳ ಸುಮಾರು 13,248 ವಿದ್ಯಾರ್ಥಿಗಳು ಯಕ್ಷಗಾನ ಶಿಕ್ಷಣದ ಅಮೃತವನ್ನು ಸವಿಯುತ್ತಿದ್ದಾರೆ. ಅದರಲ್ಲಿ ವಿಶೇಷ ಹೆಗ್ಗಳಿಕೆಯ ವಿಷಯವೆಂದರೆ, ಈ 89 ಶಾಲೆಗಳ ಪೈಕಿ 79 ಶಾಲೆಗಳ ವಿದ್ಯಾರ್ಥಿಗಳು ಯಶಸ್ವಿಯಾಗಿ ರಂಗಪ್ರವೇಶ ಮಾಡಿದ್ದು, ಒಟ್ಟು 5,234 ವಿದ್ಯಾರ್ಥಿಗಳ ಯಕ್ಷಗಾನ ರಂಗಪ್ರವೇಶ ಈಗಾಗಲೇ ಸಂಪನ್ನಗೊಂಡಿದೆ – ಇದು ಈ ಯೋಜನೆಯ ಅತ್ಯಂತ ಹರ್ಷದಾಯಕ ಮೈಲಿಗಲ್ಲಾಗಿದೆ.
ಈ ಯೋಜನೆಯು ಮುಖ್ಯವಾಗಿ ಸರಕಾರಿ ಶಾಲಾ ಮಕ್ಕಳ ಸರ್ವಾಂಗೀಣ ಅಭ್ಯುದಯವನ್ನು ಕೇಂದ್ರಬಿಂದುವಾಗಿರಿಸಿಕೊಂಡಿದೆ. ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ, ಶಾಲಾ ಅವಧಿಯಲ್ಲೇ ಶಾಲಾ ಶಿಕ್ಷಣದ ಅವಿಭಾಜ್ಯ ಅಂಗವಾಗಿ ಯಕ್ಷಶಿಕ್ಷಣದ ತರಗತಿಗಳು ನಡೆಯುತ್ತಿವೆ.

ಯಕ್ಷಗಾನ ಕಲೆಯ ಮೂಲಕ ನಮ್ಮ ಸಂಸ್ಕೃತಿ ಮತ್ತು ಭಾಷೆಯ ಉಳಿವು ಹಾಗೂ ಬೆಳವಣಿಗೆಯ ಸಂಕಲ್ಪವನ್ನು ಈ ಯೋಜನೆ ಎದೆಯಲ್ಲಿ ಹೊತ್ತು ನಡೆಯುತ್ತಿದೆ. ಯಕ್ಷಗಾನ ಕಲೆಯ ಅಭ್ಯಾಸದಿಂದ ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ವರ್ಧಿಸುವುದರ ಜೊತೆಗೆ, ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಆತ್ಮಸ್ಥೆರ್ಯ ಉದ್ದೀಪನಗೊಳ್ಳಲಿದೆ – ಮುಂದಿನ ಪೀಳಿಗೆಗೆ ಕಲೆ ಮತ್ತು ಸಂಸ್ಕೃತಿಯ ಅಮೂಲ್ಯ ಬಳುವಳಿ ದೊರೆಯಲಿದೆ.

ಸಿಎ ಉದಯ ಕುಮಾರ್ ಶೆಟ್ಟಿ, ಆರತಿ ರಾಮಚಂದ್ರ ಆಳ್ವ, ಸೀತಾರಾಮ್ ರೈ ಸವಣೂರು, ಪ್ರಭಾಕರ ಜೋಷಿ, ಭುಜಬಲಿ ಧರ್ಮಸ್ಥಳ, ಪ್ರದೀಪ್ ಆಳ್ವ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!