ಇರಾನ್‌ ವಿರುದ್ಧದ ಯುದ್ಧದಿಂದ ಅಸ್ತ್ರಾಗಾರ ಖಾಲಿ: ಅಮೆರಿಕದ ಮಿಲಿಟರಿ ಶಕ್ತಿ ಬುಡಮೇಲು!

ವಾಷಿಂಗ್ಟನ್: ಇರಾನ್ ಮೇಲೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಿದ ಸಮರವು ಅಮೆರಿಕದ ಮಿಲಿಟರಿ ಶಕ್ತಿಯನ್ನೇ ಬುಡಮೇಲು ಮಾಡುವ ಹಂತಕ್ಕೆ ತಲುಪಿದೆ. ಇತ್ತೀಚಿನ ಪೆಂಟಗನ್ ವರದಿಗಳ ಪ್ರಕಾರ, ಇರಾನ್ ಮೇಲಿನ ದಾಳಿಗಾಗಿ ಅಮೆರಿಕ ತನ್ನ ಅಸ್ತ್ರಾಗಾರದಲ್ಲಿದ್ದ ಸಾವಿರಾರು ಅತ್ಯಾಧುನಿಕ ಕ್ಷಿಪಣಿಗಳನ್ನು ಈಗಾಗಲೇ ಸುಟ್ಟು ಮುಗಿಸಿದೆ. ಇದರಿಂದಾಗಿ ರಷ್ಯಾ ಮತ್ತು ಚೀನಾದಂತಹ ಬಲಿಷ್ಠ ರಾಷ್ಟ್ರಗಳ ವಿರುದ್ಧ ಬಳಸಬೇಕಿದ್ದ ಮೀಸಲು ಮದ್ದುಗುಂಡುಗಳ ದಾಸ್ತಾನು ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಯುದ್ಧ ವಿಮಾನಗಳಿಂದ ಉಡಾಯಿಸುವ ʻಜೆ.ಎ.ಎಸ್.ಎಸ್.ಎಂ-ಇ.ಆರ್’ (JASSM-ER) ಎಂಬ ಸುಮಾರು 1,500 ಅತ್ಯಾಧುನಿಕ ಕ್ಷಿಪಣಿಗಳಲ್ಲಿ ಈಗಾಗಲೇ 1,100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಇರಾನ್ ವಿರುದ್ಧ ಬಳಸಲಾಗಿದೆ. ಈ ಕ್ಷಿಪಣಿಯ ಒಂದರ ಬೆಲೆ ಅಂದಾಜು 9 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು. ಇನ್ನು ಸಮುದ್ರದ ಮೂಲಕ ದಾಳಿ ಮಾಡುವ 1,000ಕ್ಕೂ ಹೆಚ್ಚು ʻಟೋಮಾಹಾಕ್’ (Tomahawk) ಕ್ಷಿಪಣಿಗಳೂ ವ್ಯಯವಾಗಿವೆ. ಅಚ್ಚರಿಯೆಂದರೆ, ಇಷ್ಟು ದೊಡ್ಡ ಸಂಖ್ಯೆಯ ಕ್ಷಿಪಣಿಗಳನ್ನು ತಯಾರಿಸಲು ಅಮೆರಿಕದ ಕಂಪನಿಗಳಿಗೆ ಕನಿಷ್ಠ ಹತ್ತು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ.

ಪೇಟ್ರಿಯಟ್ ಕೊರತೆ:
ಇರಾನ್ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುವ ʻಪೇಟ್ರಿಯಟ್’ (Patriot) ಕ್ಷಿಪಣಿಗಳೂ ತೀವ್ರವಾಗಿ ಖಾಲಿಯಾಗಿವೆ. ಕೇವಲ 38 ದಿನಗಳ ಯುದ್ಧದಲ್ಲಿ ಅಮೆರಿಕ 1,200ಕ್ಕೂ ಹೆಚ್ಚು ಪೇಟ್ರಿಯಟ್ ಇಂಟರ್ಸೆಪ್ಟರ್‌ಗಳನ್ನು ಬಳಸಿದೆ. ಇದರ ಒಟ್ಟು ವೆಚ್ಚ ಅಂದಾಜು 35 ಬಿಲಿಯನ್ ಡಾಲರ್ (ಸುಮಾರು 2.9 ಲಕ್ಷ ಕೋಟಿ ರೂಪಾಯಿ) ದಾಟಿದೆ ಎಂದು ವರದಿಯಾಗಿದೆ. ಅಂದರೆ ಅಮೆರಿಕ ಈ ಯುದ್ಧಕ್ಕಾಗಿ ದಿನಕ್ಕೆ ಸರಾಸರಿ 8,300 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ!

ಸದ್ಯ ಇರಾನ್ ಮತ್ತು ಅಮೆರಿಕ ನಡುವೆ ಅಸ್ಥಿರ ಕದನ ವಿರಾಮವಿದ್ದರೂ, ಅಮೆರಿಕದ ಮೂರನೇ ಯುದ್ಧ ನೌಕೆ (Aircraft Carrier) ʻಯುಎಸ್ಎಸ್ ಜಾರ್ಜ್ ಹೆಚ್.ಡಬ್ಲ್ಯೂ ಬುಷ್’ ಪಶ್ಚಿಮ ಏಷ್ಯಾವನ್ನು ತಲುಪಿದೆ. “ನನಗೆ ಅವಸರವಿಲ್ಲ, ಆದರೆ ಇರಾನ್‌ಗೆ ಸಮಯ ಮೀರುತ್ತಿದೆ” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಆದರೆ ತಜ್ಞರ ಪ್ರಕಾರ, ಅಮೆರಿಕ ತನ್ನ ಮದ್ದುಗುಂಡುಗಳನ್ನು ಮರುಭರ್ತಿ ಮಾಡಿಕೊಳ್ಳದಿದ್ದರೆ, ಭವಿಷ್ಯದಲ್ಲಿ ಚೀನಾ ಅಥವಾ ರಷ್ಯಾದಿಂದ ಎದುರಾಗಬಹುದಾದ ಸವಾಲುಗಳನ್ನು ಎದುರಿಸುವುದು ಕಷ್ಟವಾಗಲಿದೆ.

error: Content is protected !!