
ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪಿನ ನಡುವೆ ಜಗಳ ನಡೆದು, ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಲ್ಲಿಕಾರ್ಜುನ್(24) ಕೊಲೆಯಾದ ಯುವಕ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಮಲ್ಲಿಕಾರ್ಜುನ್ ಸ್ನೇಹಿತ ಪ್ರಶಾಂತ್ ಎಂಬಾತ ಸಾಕಿದ್ದ ಪಾರಿವಾಳವನ್ನು ಅದೇ ಏರಿಯಾದ ಸುರೇಂದ್ರ, ದರ್ಶನ್ ಹಾಗೂ ಮಹೇಂದ್ರ ಎಂಬುವವರ ಗುಂಪು ಕಳ್ಳತನ ಮಾಡಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಎರಡೂ ಗುಂಪುಗಳ ನಡುವೆ ಜಗಳ ಆರಂಭವಾಗಿತ್ತು.

ಈ ವೇಳೆ ಸ್ನೇಹಿತ ಪ್ರಶಾಂತ್ ಕರೆ ಮಾಡಿದ್ದಾನೆಂದು ಗಲಾಟೆ ನಡೆಯುತ್ತಿದ್ದ ಸ್ಥಳಕ್ಕೆ ಮಲ್ಲಿಕಾರ್ಜುನ್ ಧಾವಿಸಿದ್ದರು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಆರೋಪಿಗಳ ಗುಂಪು ಮಲ್ಲಿಕಾರ್ಜುನ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ಬೆನ್ನು ಮತ್ತು ದೇಹದ ಹಲವು ಭಾಗಗಳಿಗೆ ಚಾಕುವಿನಿಂದ ಇರಿದ ಪರಿಣಾಮ ಮಲ್ಲಿಕಾರ್ಜುನ್ ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದರು.

ತೀವ್ರವಾಗಿ ಗಾಯಗೊಂಡಿದ್ದ ಮಲ್ಲಿಕಾರ್ಜುನ್‌ರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಮಾರು ಆರು ಬಾಟಲ್ ರಕ್ತ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗನ ಶವದ ಮುಂದೆ ಪೋಷಕರು ಕಣ್ಣೀರಾಕುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲನಗರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಸುರೇಂದ್ರ, ದರ್ಶನ್ ಮತ್ತು ಮಹೇಂದ್ರ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.