ಶಿವಮೊಗ್ಗ: ಒಂಟಿ ಮಹಿಳೆಯ ಮನೆಗೆ ನುಗ್ಗಿದ ಖದೀಮರು ಮಹಿಳೆಯ ಕೈಗಳನ್ನು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಅವರ ಮೈಮೇಲಿದ್ದ ಹಾಗೂ ಬೀರುವಿನಲ್ಲಿದ್ದ ಸುಮಾರು ರೂ. 18 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿದ ಘಟನೆ ಜಿಲ್ಲೆಯ ಆಗುಂಬೆ ಬಳಿ ನಡೆದಿದೆ.

ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಲಕ್ಕುಂದ ಗ್ರಾಮದ ವಿಶಾಲಾಕ್ಷಿ(74) ಎಂಬವವರ ಮನೆಯಲ್ಲಿ ದರೋಡೆಯಾಗಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ವಿಶಾಲಾಕ್ಷಿ ಅವರ ಪತಿ 15 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಹಾಗಾಗಿ ಅವರು ಮನೆಯಲ್ಲಿ ಒಬ್ಬರೇ ವಾಸವಿದ್ದರು. ಏಪ್ರಿಲ್ 21ರಂದು ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ವಿಶಾಲಾಕ್ಷಿ ಅವರು ಮನೆಯಲ್ಲಿ ಮಲಗಿದ್ದಾಗ ಯಾರೋ ಬಾಗಿಲು ತಟ್ಟಿದ ಶಬ್ದ ಕೇಳಿಸಿತು. ಕಿಟಕಿಯ ಮೂಲಕ ನೋಡಿದಾಗ ಮೂವರು ಅಪರಿಚಿತರು ನಿಂತಿದ್ದರು.

ಮೂವರು ಅಪರಿಚಿತರು ಕುಡಿಯಲು ನೀರು ಕೊಡಿ ಎಂದು ವಿಶಾಲಾಕ್ಷಿ ಅವರನ್ನು ಕೇಳಿದ್ದರು. ಬಾಗಿಲು ತೆರೆಯದ ಅವರು, ಕಿಟಕಿಯ ಮೂಲಕವೇ “ನಲ್ಲಿಯಲ್ಲಿ ಇರುವ ನೀರು ಕುಡಿಯಿರಿ” ಎಂದು ತಿಳಿಸಿದ್ದಾರೆ. ಕೆಲವು ನಿಮಿಷಗಳ ಬಳಿಕ ಅನುಮಾನಗೊಂಡ ವೃದ್ಧೆ ಹಿತ್ತಲ ಬಾಗಿಲು ತೆರೆದು ಪರಿಶೀಲಿಸಿದರು. ಅಲ್ಲೇ ಮರೆಯಾಗಿ ನಿಂತಿದ್ದ ಮೂವರು ಅಪರಿಚಿತರು ಒಮ್ಮೆಲೆ ಮನೆಯೊಳಗೆ ನುಗ್ಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಒಳ ನುಗ್ಗಿದ ದರೋಡೆಕೋರರು ವಿಶಾಲಾಕ್ಷಿ ಅವರ ಬಾಯಿಯನ್ನು ಒತ್ತಿಹಿಡಿದು ಬೆದರಿಸಿದ್ದಾರೆ. ಬಳಿಕ ಅವರ ಕೈಗಳನ್ನು ಸೀರೆಯಿಂದ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಅಡುಗೆ ಮನೆಯಲ್ಲಿ ಕೂಡಿ ಹಾಕಿದ್ದರು. ಈ ವೇಳೆ ವೃದ್ಧೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದರೋಡೆಕೋರರು ಮನೆಯಲ್ಲಿದ್ದ ಬೀರುವನ್ನು ಒಡೆದು ಅದರಲ್ಲಿದ್ದ ಆಭರಣಗಳನ್ನು ದೋಚಿದ್ದಾರೆ. ವಿಶಾಲಾಕ್ಷಿ ಅವರ ಮೈಮೇಲಿದ್ದ ಚಿನ್ನದ ಸರ, ಎರಡು ಕೈಬಳೆ, ಕಿವಿಯೋಲೆ ಸೇರಿದಂತೆ ಒಟ್ಟು 146 ಗ್ರಾಂ ತೂಕದ ವಿವಿಧ ಚಿನ್ನಾಭರಣಗಳನ್ನು ಕಸಿದುಕೊಂಡಿದ್ದಾರೆ. ಇವುಗಳ ಮೌಲ್ಯ ಅಂದಾಜು ರೂ. 17.52 ಲಕ್ಷ ಎನ್ನಲಾಗಿದೆ. ಇದಲ್ಲದೆ ಬೀರುವಿನಲ್ಲಿದ್ದ ರೂ. 50,000 ನಗದು, ಟೇಬಲ್ ಮೇಲಿದ್ದ ಪರ್ಸ್‌ನಲ್ಲಿದ್ದ ರೂ. 1,000 ಹಾಗೂ ಒಂದು ಮೊಬೈಲ್ ಫೋನ್‌ನ್ನು ದೋಚಿ, ಬಳಿಕ ಹಿತ್ತಲ ಬಾಗಿಲಿನ ಮೂಲಕ ಪರಾರಿಯಾಗಿದ್ದಾರೆ.

ದರೋಡೆಕೋರರು ಹೋದ ನಂತರ ವಿಶಾಲಾಕ್ಷಿ ಅವರು ಕೈಕಟ್ಟುಗಳನ್ನು ಬಿಡಿಸಿಕೊಂಡಿದ್ದಾರೆ. ನಂತರ ಚಾಕುವಿನಿಂದ ಬಾಗಿಲಿಗೆ ತೂತು ಮಾಡಿ ಚಿಲಕ ತೆಗೆದು ಹೊರಬಂದಿದ್ದಾರೆ. ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ ನಂತರ ಅವರ ಸಂಬಂಧಿಕರು ಆಗಮಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ಅವರು ಸ್ಥಳಕ್ಕೆ ಭೇಟಿ ನೀಡಿದರು.