ಮಂಗಳೂರು: ನಗರದಲ್ಲಿ ಬುಧವಾರ ಮುಂಜಾನೆ ಸುರಿದ ಭಾರೀ ಮಳೆಗೆ ವಿವಿಧೆಡೆ ಅವಾಂತರಗಳು ಸಂಭವಿಸಿವೆ. ಚಮ್ಮಾರ ಗಲ್ಲಿಯ ಅಶ್ವತ್ಥ ಕಟ್ಟೆಯ ಬಳಿ ಬೃಹತ್ ಮರದ ಕೊಂಬೆ ಮುರಿದು ಬಿದ್ದಿದ್ದು, ಮನೆ ಹಾಗೂ ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಬುಧವಾರ ಬೆಳಗಿನ ಜಾವ ಸುಮಾರು 3:30ರ ಹೊತ್ತಿಗೆ ಚಮ್ಮಾರ ಗಲ್ಲಿ ಮತ್ತು ಬಸವನಗುಡಿ ಪರಿಸರದ ಅಶ್ವತ್ಥ ಕಟ್ಟೆಯ ಬಳಿ ಇದ್ದ ಬೃಹತ್ ಮರದ ಕೊಂಬೆಯೊಂದು ಏಕಾಏಕಿ ಮುರಿದು ಬಿದ್ದಿದೆ. ಘಟನೆಯ ತೀವ್ರತೆಗೆ ಮರದ ಸಮೀಪದಲ್ಲಿದ್ದ ಎರಡು ಮನೆಗಳ ಮೇಲ್ಛಾವಣಿಗೆ ಭಾಗಶಃ ಹಾನಿಯಾಗಿದೆ. ಗಾಢ ನಿದ್ರೆಯಲ್ಲಿದ್ದ ನಿವಾಸಿಗಳು ಭಾರೀ ಶಬ್ದಕ್ಕೆ ಗಾಬರಿಗೊಂಡು ಮನೆಯಿಂದ ಹೊರಬಂದಿದ್ದಾರೆ.

ಮರದ ಕೊಂಬೆಗಳು ಅಪ್ಪಳಿಸಿದ ರಭಸಕ್ಕೆ ಅಶ್ವತ್ಥ ಕಟ್ಟೆಯ ಬಳಿ ಪಾರ್ಕಿಂಗ್ ಮಾಡಲಾಗಿದ್ದ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಈ ಪೈಕಿ ಎರಡು ವಾಹನಗಳು ಮರದ ಭಾರಕ್ಕೆ ಸಿಲುಕಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ. ಮರ ಬೀಳುವ ಸಮಯದಲ್ಲಿ ರಸ್ತೆಯಲ್ಲಿ ಜನಸಂಚಾರ ಇಲ್ಲದ ಕಾರಣ ದೊಡ್ಡ ಮಟ್ಟದ ದುರಂತವೊಂದು ತಪ್ಪಿದಂತಾಗಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ನಗರದ ಮತ್ತೊಂದು ಭಾಗವಾದ ಅತ್ತಾವರದ ಅಯ್ಯಪ್ಪ ಮಂದಿರದ ಬಳಿ ಮಳೆಯ ಆರ್ಭಟಕ್ಕೆ ಪಾರ್ಕಿಂಗ್ ಪ್ರದೇಶದ ತಡೆಗೋಡೆಯೊಂದು ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳು ಅಲ್ಲಿ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಬಿದ್ದ ಪರಿಣಾಮವಾಗಿ ಹಲವಾರು ಕಾರುಗಳು ಜಖಂಗೊಂಡಿವೆ. ಮಳೆಯಿಂದಾಗಿ ನಗರದ ಸಂಚಾರ ವ್ಯವಸ್ಥೆಯಲ್ಲೂ ಏರುಪೇರು ಉಂಟಾಗಿತ್ತು.

ಘಟನೆ ನಡೆದ ತಕ್ಷಣ ಸ್ಥಳೀಯರು ಮತ್ತು ಮಂಗಳೂರು ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅಶ್ವತ್ಥ ಮರದ ಕೊಂಬೆಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ರಥಬೀದಿ ಮತ್ತು ಬಸವನಗುಡಿ ಪರಿಸರದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮರದ ಅವಶೇಷಗಳನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಮಳೆಯ ಮುನ್ಸೂಚನೆ ಇರುವುದರಿಂದ ನಗರದ ಹಳೆಯ ಮರಗಳು ಮತ್ತು ಶಿಥಿಲಗೊಂಡಿರುವ ಗೋಡೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯ ಆಡಳಿತ ಸೂಚಿಸಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ಬಗ್ಗೆ ಮಾಹಿತಿ ನೀಡುವಂತೆ ನಿವಾಸಿಗಳಿಗೆ ಮನವಿ ಮಾಡಲಾಗಿದೆ.