ಮಂಗಳೂರು: “ಮಹಿಳೆಯರಿಗೆ 50% ಮೀಸಲಾತಿ ನೀಡುವ ಬದಲು, ಮಸೂದೆಯೊಂದಿಗೆ ‘ಕ್ಷೇತ್ರ ಮರುವಿಂಗಡಣೆ’ಯನ್ನು ಲಿಂಕ್ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳಿಗೆ ಮಹಾ ದ್ರೋಹ ಎಸಗಲು ಸಂಚು ರೂಪಿಸಿದೆ” ಎಂದು ಕಾಂಗ್ರೆಸ್ ನಾಯಕಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ ಅವರು ಗಂಭೀರವಾಗಿ ಆರೋಪಿಸಿದರು.

ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾವುದೇ ಪೂರ್ವ ಚರ್ಚೆ ನಡೆಸದೆ ಏಪ್ರಿಲ್ 17ರಂದು ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಯಿತು. ಆದರೆ ಇದರ ಜೊತೆಯಲ್ಲಿ ‘ಕ್ಷೇತ್ರ ಮರುವಿಂಗಡಣೆ’ಯ ಮಸೂದೆಯನ್ನೂ ಲಿಂಕ್ ಮಾಡಿದ್ದರಿಂದ ಇವತ್ತು ಇಡೀ ಮಸೂದೆ ಬಿದ್ದು ಹೋಗುವಂತಾಗಿದೆ. ಇದು ಕೇಂದ್ರ ಸರ್ಕಾರಕ್ಕೆ ಆದ ದೊಡ್ಡ ರಾಜಕೀಯ ಸೋಲು. ಮಹಿಳೆಯರಿಗೆ ತಕ್ಷಣ ಮೀಸಲಾತಿ ನೀಡುವ ಉದ್ದೇಶ ಸರ್ಕಾರಕ್ಕೆ ಇದ್ದಿದ್ದರೆ, ಈ ಕಠಿಣ ಷರತ್ತನ್ನು ವಿಧಿಸುವ ಅಗತ್ಯವಿರಲಿಲ್ಲ,” ಎಂದು ಅವರು ವಿಶ್ಲೇಷಿಸಿದರು.

“ಕ್ಷೇತ್ರ ಮರುವಿಂಗಡಣೆಯನ್ನು ಮಹಿಳಾ ಮೀಸಲಾತಿಯೊಂದಿಗೆ ಬೆರೆಸಿದ್ದು ರಾಜಕೀಯ ಸಂಚು. ಇದರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳು ಕಡಿಮೆಯಾಗುತ್ತವೆ. ಇಂಡಿಯಾ ಒಕ್ಕೂಟವು ಒಗ್ಗಟ್ಟಾಗಿ ಈ ಮಸೂದೆಯನ್ನು ತಡೆಹಿಡಿಯದಿದ್ದರೆ, ಇವತ್ತು ದಕ್ಷಿಣದ ರಾಜ್ಯಗಳ ಧ್ವನಿ ಸಂಸತ್ತಿನಲ್ಲಿ ಅಡಗಿ ಹೋಗುತ್ತಿತ್ತು,” ಎಂದು ಅಪ್ಪಿ ಕಳವಳ ವ್ಯಕ್ತಪಡಿಸಿದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
“ಪ್ರಧಾನಿ ಮೋದಿಯವರು ದೇಶಾದ್ಯಂತ ಸಂಚರಿಸಿ ಕಾಂಗ್ರೆಸ್ ಮಹಿಳಾ ವಿರೋಧಿ ಎಂದು ಸುಳ್ಳು ಪ್ರಚಾರ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಆದರೆ ಸತ್ಯ ಏನೆಂದರೆ, ಈ ದೇಶಕ್ಕೆ ಇಂದಿರಾ ಗಾಂಧಿಯಂತಹ ಸಮರ್ಥ ಮಹಿಳಾ ಪ್ರಧಾನಿಯನ್ನು, ಪ್ರತಿಭಾ ಪಾಟೀಲ್ ಅವರಂತಹ ರಾಷ್ಟ್ರಪತಿಯನ್ನು ಮತ್ತು ಮೀರಾ ಕುಮಾರ್ ಅವರಂತಹ ಸ್ಪೀಕರ್ ಅನ್ನು ನೀಡಿದ್ದು ಇದೇ ಕಾಂಗ್ರೆಸ್ ಪಕ್ಷ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಮಹಿಳೆಯರಿಗೆ ಯಾವ ಉನ್ನತ ಸ್ಥಾನ ನೀಡಿದೆ? ಅವರ ಅಧಿಕಾರ ಕೇವಲ ಭಾಷಣಕ್ಕೆ ಸೀಮಿತವಾಗಿದೆ,” ಎಂದು ಅವರು ತಿರುಗೇಟು ನೀಡಿದರು.

“ದೇಶದಲ್ಲಿ ನಾವು 50% ಜನಸಂಖ್ಯೆ ಹೊಂದಿದ್ದೇವೆ. ನಮಗೆ ಸಿಗಬೇಕಾದ ಹಕ್ಕನ್ನು ನೀಡಲು ಬಿಜೆಪಿ ಯಾಕೆ ಹಿಂದೇಟು ಹಾಕುತ್ತಿದೆ? 2023ರಲ್ಲಿ ‘ನಾರಿ ಶಕ್ತಿ ವಂದನಾ’ ಹೆಸರಿನಲ್ಲಿ ನಾಟಕವಾಡಿದ ಬಿಜೆಪಿ, ಈಗ ಅದಕ್ಕೆ ಕ್ಷೇತ್ರ ವಿಂಗಡಣೆಯ ಉರುಳು ಹಾಕಿದೆ. ಕಾಂಗ್ರೆಸ್ ಪಕ್ಷವು ಯಾವತ್ತೂ ಮಹಿಳೆಯರ ಪರವಾಗಿದ್ದು, ತಕ್ಷಣವೇ ಯಾವುದೇ ಷರತ್ತುಗಳಿಲ್ಲದೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತರಬೇಕು,” ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖರಾದ ಪತ್ರಿಕಾಗೋಷ್ಠಿಯಲ್ಲಿ ಸ್ವರೂಪ, ನೀತಾ, ಸವಿತಾ ಮಿಸ್ಕಿತ್, ಗೀತಾ ಪ್ರವೀಣ್, ಶಾಂತಲಾ ಗಟ್ಟಿ, ಚಂದ್ರಕಲಾ ಮತ್ತಿತರರಿದ್ದರು.