ಮನೆಯಂಗಳದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವುಗೈದ ಕಳ್ಳ !

ಕಾರ್ಕಳ: ಮನೆಯ ಬಾಗಿಲು ಒಡೆದು ಒಳನುಗ್ಗಿ, ಬಳಿಕ ಮನೆಯ ಬಳಿ ನಿಲ್ಲಿಸಿದ್ದ ಸ್ಕೂಟರ್‌ ಅನ್ನು ಕಳವು ಮಾಡಿರುವ ಘಟನೆ ಕಾರ್ಕಳದ ಕಸಬಾ ಗ್ರಾಮದ ಆನಂದ ನಗರದಲ್ಲಿ ಭಾನುವಾರ(ಏ.19) ಮುಂಜಾನೆ ನಡೆದಿದೆ.

ಆನಂದ ನಗರದ “ಸ್ಟಾರ್ ಕೇಬಲ್ ನೆಟ್‌ವರ್ಕ್” ಸಮೀಪದ ಕರಿಯಕಲ್ಲು ನಿವಾಸಿ ಹರೀಶ್ ಶೆಟ್ಟಿಯವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು, ಕೆಲಸದ ನಿಮಿತ್ತ ಉಜಿರೆಯಲ್ಲಿರುವ ಹರೀಶ್ ಅವರು, ಏಪ್ರಿಲ್ 16ರಂದು ಬೆಳಿಗ್ಗೆ ಮನೆಗೆ ಬೀಗ ಹಾಕಿ ತೆರಳಿದ್ದರು. ಏಪ್ರಿಲ್ 19ರಂದು ಬೆಳಿಗ್ಗೆ ಸಂಬಂಧಿಕರು ಕರೆ ಮಾಡಿ ಮನೆಯ ಬಾಗಿಲು ಒಡೆದಿರುವ ಬಗ್ಗೆ ಮಾಹಿತಿ ನೀಡಿದಾಗ ವಿಚಾರ ಬೆಳಕಿಗೆ ಬಂದಿದೆ.

ಕಳ್ಳನು ಏಪ್ರಿಲ್ 19ರ ಮುಂಜಾನೆ ವೇಳೆ ಮನೆಯ ಮುಖ್ಯ ಬಾಗಿಲನ್ನು ಯಾವುದೋ ಸಾಧನದಿಂದ ತೆರೆದು ಒಳಪ್ರವೇಶಿಸಿದ್ದು, ಮನೆಯೊಳಗಿದ್ದ ಕಪಾಟಿನ ಬೀಗ ಮುರಿದು ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾನೆ. ಬಳಿಕ ಮನೆಯೊಳಗೆ ಇರಿಸಲಾಗಿದ್ದ ಸ್ಕೂಟರ್‌ ಕೀಯನ್ನು ಪಡೆದು, ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ವಾಹನವನ್ನೇ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಘಟನೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

ಈ ಕುರಿತು ಹರೀಶ್ ಶೆಟ್ಟಿ ಅವರು ನೀಡಿದ ದೂರಿನನ್ವಯ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!