ಅಡುಗೆ ಅನಿಲಕ್ಕೆ 25 ದಿನಗಳ ವೇಟಿಂಗ್: ಗ್ಯಾಸ್‌ ಅಭಾವದ ಹಿಂದೆ ಕಾಳಸಂತೆಕೋರರ ಕರಿನೆರಳು? ಹಠಾತ್ ದಾಳಿಗೆ ಒತ್ತಾಯ

ಮಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಯುದ್ಧದ ಭೀತಿಯ ನಡುವೆ ಭಾರತದಲ್ಲಿ ಅಡುಗೆ ಅನಿಲದ (LPG) ಬಿಕ್ಕಟ್ಟು ತಾರಕಕ್ಕೇರಿದೆ. ಗ್ಯಾಸ್ ಬುಕ್ ಮಾಡಿದ ನಂತರ ಸಿಲಿಂಡರ್ ಮನೆಗೆ ಬರಲು ಬರೋಬ್ಬರಿ 25 ದಿನಗಳ ಕಾಲ ಕಾಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಏಜೆನ್ಸಿಗಳು ಮತ್ತು ಮಧ್ಯವರ್ತಿಗಳು ಕಾಳಸಂತೆ ದಂಧೆಗೆ ಇಳಿದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಅನಿಲ ಪೂರೈಕೆ ಕುಂಠಿತಗೊಂಡಿರುವುದು ನಿಜವಾದರೂ, ಸ್ಥಳೀಯ ಮಟ್ಟದಲ್ಲಿ ಗ್ಯಾಸ್ ಏಜೆನ್ಸಿಗಳು ಕೃತಕ ಅಭಾವ ಸೃಷ್ಟಿಸುತ್ತಿವೆ ಎಂಬ ದೂರುಗಳು ವ್ಯಾಪಕವಾಗಿವೆ. ಸಾಮಾನ್ಯ ಗ್ರಾಹಕರಿಗೆ ʻಸ್ಟಾಕ್ ಇಲ್ಲ’ ಎಂಬ ಉತ್ತರ ನೀಡುವ ಕೆಲವು ಏಜೆನ್ಸಿಗಳು, ಹಿಂಬಾಗಿಲಿನ ಮೂಲಕ ವಾಣಿಜ್ಯ ಬಳಕೆದಾರರಿಗೆ ಮತ್ತು ಹೋಟೆಲ್‌ಗಳಿಗೆ ದುಪ್ಪಟ್ಟು ದರಕ್ಕೆ ಸಿಲಿಂಡರ್ ಮಾರಾಟ ಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ. ಆನ್‌ಲೈನ್‌ನಲ್ಲಿ ಗ್ಯಾಸ್‌ ಬುಕಿಂಗ್‌ ಆಗಿ ಅದರ ಡಿಎಸಿ(DAC) ನಂಬರನ್ನು ಏಜೆನ್ಸಿಯವರಿಗೆ ನೀಡಿದರೂ ಗ್ಯಾಸ್‌ ವಿತರಣೆಯಾಗುತ್ತಿಲ್ಲ. ಸಿಲಿಂಡರ್‌ ಹಿಡಿದುಕೊಂಡು ಏಜೆನ್ಸಿ ಮುಂದೆ ಗಂಟೆಗಟ್ಟಲೆ ಕಾದರೂ ಸಿಗುತ್ತಿಲ್ಲ. ಇದರಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಅಡುಗೆ ಮಾಡಲು ಸೌದೆ ಒಲೆ ಅಥವಾ ಇಂಡಕ್ಷನ್ ಸ್ಟೌವ್‌ಗಳನ್ನು ಆಶ್ರಯಿಸುವಂತಾಗಿದೆ.

ಗ್ಯಾಸ್ ಏಜೆನ್ಸಿಗಳ ಮೇಲೆ ದಾಳಿಗೆ ಆಗ್ರಹ
ಪೂರೈಕೆಯಲ್ಲಿನ ಈ ಅಕ್ರಮಗಳನ್ನು ತಡೆಯಲು ಆಯಾಯ ತಾಲೂಕಿನ ತಹಶೀಲ್ದಾರ್‌ಗಳು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಗ್ಯಾಸ್ ಏಜೆನ್ಸಿಗಳ ದಾಸ್ತಾನು ಮಳಿಗೆಗಳ (Godowns) ಮೇಲೆ ಅನಿರೀಕ್ಷಿತ ದಾಳಿ ನಡೆಸಿ, ಸ್ಟಾಕ್ ರಿಜಿಸ್ಟರ್ ಪರಿಶೀಲಿಸಬೇಕು. ಬುಕ್ಕಿಂಗ್ ಆದ್ಯತೆಯ ಮೇರೆಗೆ ಸಿಲಿಂಡರ್ ವಿತರಣೆಯಾಗುತ್ತಿದೆಯೇ ಅಥವಾ ಕಾಳಸಂತೆಗೆ ರವಾನೆಯಾಗುತ್ತಿದೆಯೇ ಎಂಬುದನ್ನು ಪತ್ತೆಹಚ್ಚಿ, ತಪ್ಪಿತಸ್ಥ ಏಜೆನ್ಸಿಗಳ ಪರವಾನಗಿ ರದ್ದುಪಡಿಸಬೇಕೆಂದು ಜನರು ಆಗ್ರಹಿಸಿದ್ದಾರೆ.

ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಕಾಳಸಂತೆಯಲ್ಲಿ ಗಗನಕ್ಕೇರಿರುವುದರಿಂದ ಸಣ್ಣಪುಟ್ಟ ಹೋಟೆಲ್ ಮತ್ತು ಬೀದಿಬದಿ ತಿಂಡಿ ಮಾರಾಟಗಾರರು ವ್ಯಾಪಾರ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿದ್ದಾರೆ. 50 ರೂಪಾಯಿಯ ಊಟದ ಬೆಲೆ ಈಗ ಮೂರು ಪಟ್ಟು ಹೆಚ್ಚಾಗಲು ಗ್ಯಾಸ್ ಬೆಲೆ ಏರಿಕೆಯೇ ಪ್ರಮುಖ ಕಾರಣವಾಗಿದೆ. ತಹಶೀಲ್ದಾರ್ ನೇತೃತ್ವದ ಕಂದಾಯ ಇಲಾಖೆ ಮತ್ತು ಆಹಾರ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರೆ ಮಾತ್ರ ಈ ಕಾಳಸಂತೆಕೋರರಿಗೆ ಬ್ರೇಕ್ ಹಾಕಲು ಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಗ್ಯಾಸ್ ಸಿಲಿಂಡರ್ ಸಿಗುವುದು ಅನಿಶ್ಚಿತವಾಗಿರುವುದರಿಂದ ಮಾರುಕಟ್ಟೆಯಲ್ಲಿ ಇಂಡಕ್ಷನ್ ಸ್ಟೌವ್‌ಗಳ ಬೇಡಿಕೆ ಶೇ. 30ರಷ್ಟು ಹೆಚ್ಚಾಗಿದೆ. ವಿದ್ಯುತ್ ಒಲೆಗಳನ್ನು ಬಳಸುವ ಮೂಲಕ ಗ್ಯಾಸ್ ಮೇಲಿನ ಅವಲಂಬನೆ ಕಡಿಮೆ ಮಾಡಲು ಜನರು ಮುಂದಾಗಿದ್ದಾರೆ. ಆದರೂ, ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯದ ನಡುವೆ ಗ್ಯಾಸ್ ಸಿಲಿಂಡರ್ ಅನಿವಾರ್ಯವಾಗಿದ್ದು, ಕೂಡಲೇ ಆಡಳಿತ ಯಂತ್ರ ಎಚ್ಚೆತ್ತುಕೊಂಡು ಪಾರದರ್ಶಕ ವಿತರಣೆಗೆ ಕ್ರಮ ಕೈಗೊಳ್ಳಬೇಕಿದೆ.

error: Content is protected !!