ವಾಷಿಂಗ್ಟನ್/ಟೆಹ್ರಾನ್: ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮುಕ್ತಗೊಳಿಸುವ ನಿರ್ಧಾರದಿಂದ ಇರಾನ್ ಈಗ ಹಿಂದೆ ಸರಿದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧದ ನೌಕಾ ದಿಗ್ಬಂಧನವನ್ನು “ಪೂರ್ಣ ಶಕ್ತಿಯೊಂದಿಗೆ” ಮುಂದುವರಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಇರಾನ್ ಈ ಕಠಿಣ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡಗಳು ಕವಿದಂತಾಗಿವೆ.

ಇರಾನ್‌ನ ಮಿಲಿಟರಿ ಕಮಾಂಡ್ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಾಷಿಂಗ್ಟನ್ ತನ್ನ ಭರವಸೆಯನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದೆ. ಇರಾನ್‌ನ ಬಂದರುಗಳಿಗೆ ಬರುವ ಮತ್ತು ಹೋಗುವ ಹಡಗುಗಳ ಮೇಲೆ ಅಮೆರಿಕವು ನೌಕಾ ದಿಗ್ಬಂಧನವನ್ನು ಮುಂದುವರಿಸುವ ಮೂಲಕ ಈ ಹಿಂದೆ ನೀಡಿದ್ದ ವಾಗ್ದಾನವನ್ನು ಮುರಿದಿದೆ ಎಂದು ಇರಾನ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಜಲಸಂಧಿಯ ಮೇಲೆ ಮತ್ತೆ ಕಠಿಣ ನಿಯಂತ್ರಣ ಹೇರಲಾಗಿದೆ.
“ಇರಾನ್‌ನತ್ತ ಬರುವ ಎಲ್ಲಾ ಹಡಗುಗಳಿಗೆ ಅಮೆರಿಕವು ಮುಕ್ತ ಸಂಚಾರದ ಸ್ವಾತಂತ್ರ್ಯವನ್ನು ನೀಡುವವರೆಗೆ ಹಾರ್ಮುಜ್ ಜಲಸಂಧಿಯ ಪರಿಸ್ಥಿತಿಯು ಕಟ್ಟುನಿಟ್ಟಾದ ನಿಯಂತ್ರಣದಲ್ಲಿರುತ್ತದೆ” ಎಂದು ಇರಾನ್ ಸ್ಪಷ್ಟಪಡಿಸಿದೆ. ಜಾಗತಿಕ ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗದಷ್ಟು ಈ ಮಾರ್ಗದ ಮೂಲಕವೇ ನಡೆಯುವುದರಿಂದ, ಇರಾನ್‌ನ ಈ ನಿರ್ಧಾರವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಗೆ ಮತ್ತು ಆರ್ಥಿಕ ಅಸ್ಥಿರತೆಗೆ ಕಾರಣವಾಗುವ ಆತಂಕ ಮೂಡಿಸಿದೆ.
ಅಮೆರಿಕದ ಕಠಿಣ ಆರ್ಥಿಕ ನಿರ್ಬಂಧಗಳು ಮತ್ತು ಅದಕ್ಕೆ ಪ್ರತಿಯಾಗಿ ಇರಾನ್‌ನ ಮಿಲಿಟರಿ ಕ್ರಮಗಳು ಜಾಗತಿಕ ಸಮುದಾಯದಲ್ಲಿ ಆತಂಕವನ್ನು ಹೆಚ್ಚಿಸಿವೆ. ಸಂಘರ್ಷವು ತಾರಕಕ್ಕೇರಿದರೆ ಅದು ನೇರವಾಗಿ ಜಾಗತಿಕ ಸರಬರಾಜು ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ. ಸದ್ಯಕ್ಕೆ ಎರಡೂ ದೇಶಗಳು ತಮ್ಮ ಪಟ್ಟು ಸಡಿಲಿಸದ ಕಾರಣ, ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟು ಮತ್ತಷ್ಟು ಜಟಿಲವಾಗುವ ಲಕ್ಷಣಗಳು ಕಾಣುತ್ತಿವೆ.