ಖಾಕಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆದ ನಿದಾ ಖಾನ್‌: ಹೆಂಡತಿ ಎಲ್ಲಿ ಅಂದ್ರೆ ಗಂಡನಿಂದ ʻಉಲ್ಟಾ-ಪಲ್ಟಾ’ ಕಥೆ

ನಾಸಿಕ್: ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಾಸಿಕ್ ಘಟಕದಲ್ಲಿ ಮತಾಂತರ ಮತ್ತು ಲೈಂಗಿಕ ಕಿರುಕುಳದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಜಾಲದ ಪ್ರಮುಖ ಕೊಂಡಿ ಎನ್ನಲಾದ ನಿದಾ ಖಾನ್ ಕಳೆದ ಒಂದು ವಾರದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದಾಳೆ. ಈಕೆಯ ಪತಿ ಮೊಯಿನ್ ಖಾನ್ ತನಿಖಾಧಿಕಾರಿಗಳಿಗೆ ಗೊಂದಲದ ಮಾಹಿತಿ ನೀಡುತ್ತಿದ್ದು, ಪೊಲೀಸರ ತನಿಖೆಗೆ ಅಡ್ಡಿಪಡಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಅಮೆಜಾನ್ ವೆಬ್ ಸರ್ವಿಸಸ್‌ನಲ್ಲಿ ಕೆಲಸ ಮಾಡುತ್ತಿರುವ ನಿದಾ ಪತಿ ಮೊಯಿನ್, ಮೊದಲು ತನ್ನ ಪತ್ನಿ ಸಂಬಂಧಿಕರ ಮನೆಯಲ್ಲಿದ್ದಾಳೆ ಎಂದು ಹೇಳಿಕೆ ನೀಡಿದ್ದ. ಆದರೆ ಪೊಲೀಸರು ಅಲ್ಲಿಗೆ ಹೋದಾಗ ಮನೆಗೆ ಬೀಗ ಹಾಕಲಾಗಿತ್ತು. ನಂತರ ಆಕೆಯನ್ನು ಆಕೆಯ ಚಿಕ್ಕಮ್ಮ ನಾಸಿಕ್‌ಗೆ ಕರೆದೊಯ್ದಿದ್ದಾರೆ ಎಂದು ಮತ್ತೊಂದು ಕಥೆ ಕಟ್ಟಿದ್ದಾನೆ. ಸದ್ಯ ಇಬ್ಬರ ಮೊಬೈಲ್ ಫೋನ್‌ಗಳು ಸ್ವಿಚ್ ಆಫ್ ಆಗಿದ್ದು, ಪೊಲೀಸರು ಇಡೀ ಕುಟುಂಬದ ಮೇಲೆ ಕಣ್ಣಿಟ್ಟಿದ್ದಾರೆ.

ಪ್ರಕರಣದ ಮೂಲ ಇರುವುದು ನಿದಾಳ ಸಹೋದರ ಡ್ಯಾನಿಶ್ ಶೇಖ್ ಎಸಗಿದ ವಂಚನೆಯಲ್ಲಿ. ತಾನು ಅವಿವಾಹಿತ ಎಂದು ಸುಳ್ಳು ಹೇಳಿ ಸಹೋದ್ಯೋಗಿಯೊಬ್ಬರನ್ನು ಪ್ರೀತಿಸಿ ನಂಬಿಸಿದ್ದ ಈತ, ನಂತರ ಮತಾಂತರವಾಗುವಂತೆ ಒತ್ತಡ ಹೇರಿದ್ದ ಎನ್ನಲಾಗಿದೆ. ಈ ಸಂಚಿನಲ್ಲಿ ನಿದಾ ಖಾನ್ ಕೂಡ ಭಾಗಿಯಾಗಿದ್ದು, ಸಂತ್ರಸ್ತೆಯ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾಳೆ ಮತ್ತು ಬಲವಂತವಾಗಿ ಧರ್ಮ ಬದಲಿಸಲು ಪ್ರಚೋದಿಸಿದ್ದಾಳೆ ಎಂಬ ಗಂಭೀರ ದೂರು ದಾಖಲಾಗಿದೆ.

ಪೊಲೀಸರು ತನಿಖೆ ಆರಂಭಿಸುತ್ತಿದ್ದಂತೆ ಕಂಪನಿಯ ಒಳಗಿದ್ದ ಭೀಕರ ಮುಖಗಳು ಹೊರಬರುತ್ತಿವೆ. ಸುಮಾರು ಏಳು ಮಹಿಳಾ ಉದ್ಯೋಗಿಗಳು ಮುಂದೆ ಬಂದು ತಮಗೆ ಹಿರಿಯ ಅಧಿಕಾರಿಗಳಿಂದ ಲೈಂಗಿಕ ಕಿರುಕುಳವಾಗಿದೆ ಎಂದು ದೂರಿದ್ದಾರೆ. ಆಘಾತಕಾರಿ ವಿಷಯವೆಂದರೆ, ಈ ಬಗ್ಗೆ ಕಂಪನಿಯ ಎಚ್‌ಆರ್ (HR) ವಿಭಾಗಕ್ಕೆ ದೂರು ನೀಡಿದರೂ ಅವರು ಕ್ಯಾರೆ ಅಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗಾಗಲೇ ಎಚ್‌ಆರ್ ಮುಖ್ಯಸ್ಥೆ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.

ಇನ್ನೊಂದೆಡೆ ಟಿಸಿಎಸ್ ಸಂಸ್ಥೆಯು ನಿದಾ ಖಾನ್ ಅವರನ್ನು ಕೆಲಸದಿಂದ ಅಮಾನತುಗೊಳಿಸಿದೆ. ಆದರೆ ಆಕೆ ಎಚ್‌ಆರ್ ವಿಭಾಗದವಳಲ್ಲ, ಕೇವಲ ಪ್ರೊಸೆಸ್ ಅಸೋಸಿಯೇಟ್ ಎಂದು ಹೇಳುವ ಮೂಲಕ ಕಂಪನಿಯ ಘನತೆ ಉಳಿಸಿಕೊಳ್ಳಲು ಪ್ರಯತ್ನಿಸಿದೆ. ಪ್ರಕರಣದ ಗಾಂಭೀರ್ಯವನ್ನು ಪರಿಗಣಿಸಿ ಸ್ವತಂತ್ರ ನಿರ್ದೇಶಕ ಕೆಕಿ ಮಿಸ್ತ್ರಿ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ರಚಿಸಲಾಗಿದೆ. ನಿದಾ ಖಾನ್ ಸದ್ಯ ಗರ್ಭಿಣಿಯಾಗಿದ್ದು, ಇದನ್ನೇ ನೆಪವಾಗಿಟ್ಟುಕೊಂಡು ನಿರೀಕ್ಷಣಾ ಜಾಮೀನು ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದಾಳೆ.

error: Content is protected !!