
ರಾಯಚೂರು: ಬಯಲು ನಾಟಕ ನೋಡುತ್ತಿದ್ದವರ ಮೇಲೆ ಕಮಾನು ಗೋಡೆ ಕುಸಿದು ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೈಲ್ ಮರ್ಚೆಡ್ ಗ್ರಾಮದಲ್ಲಿ ನಡೆದಿದೆ.

ವಿಶ್ವನಾಥ್(8) ಹಾಗೂ ಸಾನ್ವಿತ(2) ಮೃತರು.
7 ಮಂದಿ ಕಮಾನು ಕೆಳಗೆ ಕುಳಿತು ನಾಟಕ ವೀಕ್ಷಿಸುತ್ತಿದ್ದರು. ಈ ವೇಳೆ ಕಮಾನಿನ ಗೋಡೆ ಕುಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಮಕ್ಕಳು ಮೃತಪಟ್ಟಿದ್ದು, ನಾಲ್ವರು ಮಹಿಳೆಯರಿಗೆ ಗಂಭೀರ ಗಾಯವಾಗಿದೆ.

ಲಕ್ಷ್ಮಿ, ವಿಶಾಲಕ್ಷಿ, ಯಲ್ಲಮ್ಮ ಹಾಗೂ ಬಸಮ್ಮ ಗಾಯಾಳು ಮಹಿಳೆಯರು. ಇವರಿಗೆ ಕಾಲು ಮುರಿದಿದ್ದು, ಬಸಮ್ಮ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತದೇಹಗಳನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ.