
ಬೆಂಗಳೂರು: ನಗರದಲ್ಲಿ ಟ್ರೇಡಿಂಗ್ ಕಂಪನಿ ಹೆಸರಿನಲ್ಲಿ ಕ್ರಿಸ್ಟಲ್ ಎಐ ಎಂಬ ಸಂಸ್ಥೆಯ ಮೂಲಕ ನೂರಾರು ಹೂಡಿಕೆದಾರರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ವಂಚಿಸಿದ ಆರೋಪ ಕೇಳಿಬಂದಿದ್ದು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕಾಮತ್ರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ರೋಬೋಟ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ಹೂಡಿಕೆ ಮಾಡಿದ ಹಣವನ್ನು ಡಬಲ್ ಮಾಡಿಕೊಡಲಾಗುತ್ತದೆ ಎಂದು ನಂಬಿಸಿ ಜನರನ್ನು ಬಲೆಗೆ ಬೀಳಿಸಿರವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಕಮಿಷನರ್ ಕಚೇರಿಯಲ್ಲಿ ಸಿಸಿಬಿ ಪೊಲೀಸರಿಂದ ವಿಚಾರಣೆ ನಡೆಯುತ್ತಿದ್ದು, 5 ರಿಂದ 6 ಕೋಟಿಗೂ ಅಧಿಕ ಹಣ ವಂಚನೆ ನಡೆದಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ನಿಜವಾಗಿಯೂ ವಂಚಿಸಿರುವ ಮೊತ್ತ ನೂರಾರು ಕೋಟಿಗಳಿಗೆ ತಲುಪಿರುವ ಶಂಕೆಯನ್ನೂ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಅಲ್ಲದೆ ಆರೋಪಿಗಳು ದುಬೈನಲ್ಲಿ ಕಚೇರಿ ತೆರೆದು ಅಂತರರಾಷ್ಟ್ರೀಯ ಮಟ್ಟದಲ್ಲೂ ವಂಚನೆ ಜಾಲ ವಿಸ್ತರಿಸಿರುವ ಮಾಹಿತಿ ಲಭ್ಯವಾಗಿದ್ದು, ರಾಜೇಶ್ ಕಾಮತ್ ಸೇರಿದಂತೆ ಮೂವರು ಆರೋಪಿಗಳು ಸಂಘಟಿತ ಸಂಚು ರೂಪಿಸಿ ಹೂಡಿಕೆದಾರರನ್ನು ಮೋಸಗೊಳಿಸಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.