ಮದುವೆಯಾಗಿ ನಾಲ್ಕೇ ವರ್ಷಕ್ಕೆ ಡಿವೋರ್ಸ್​; ವಿಚ್ಛೇದನದ ಬಗ್ಗೆ ಮೌನ ಮುರಿದ ಹನ್ಸಿಕಾ ಮೋಟ್ವಾನಿ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಅವರು ಉದ್ಯಮಿ ಸೋಹೈಲ್ ಕಥುರಿಯಾ ಜೊತೆಗೆ 2022ರ ಡಿಸೆಂಬರ್‌ನಲ್ಲಿ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಆದರೆ, ಕೇವಲ ನಾಲ್ಕೇ ವರ್ಷಕ್ಕೆ ಇವರು ಬೇರೆ ಆದರು. ಡಿವೋರ್ಸ್ ಪಡೆಯುವುದಕ್ಕೂ ಮೊದಲೇ ಇವರು ಬೇರೆ ಬೇರೆಯಾಗಿ ವಾಸಿಸಲು ಆರಂಭಿಸಿದ್ದರು ಎಂದು ಹೇಳಲಾಗಿತ್ತು. ಈಗ ವಿಚ್ಛೇದನದ ಬಗ್ಗೆ ಹನ್ಸಿಕಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಡಿವೋರ್ಸ್​​ಗೆ ಸೋಹೈಲ್ ಕಾರಣ ಎಂದು ಪರೋಕ್ಷವಾಗಿ ಹೇಳಿದ್ದಾರೆ.

“ಜನರು ಕ್ಲಿಕ್‌ಬೈಟ್ ಬಯಸಿದ್ದರು, ಅವರಿಗೆ ಅದು ಸಿಕ್ಕಿತು. ಅವರಿಗೆ ಹೆಡ್​​ಲೈನ್ ಬೇಕಿತ್ತು ಅದು ಅವರಿಗೆ ಸಿಕ್ಕಿತು. ನನಗೆ ಇದೆಲ್ಲ ಮುಖ್ಯ ಎಂದು ಅನಿಸಲಿಲ್ಲ. ಹೀಗಾಗಿ, ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ಯಾರಾದರೂ ಗೊತ್ತಿಲ್ಲದೆ ತಪ್ಪಾದ ರೈಲನ್ನು ಏರಿದರೆ, ಅದರಲ್ಲಿ ಪ್ರಯಾಣ ಮಾಡಿ ಕೊರಗುವುದಕ್ಕಿಂತ, ರೈಲಿನಿಂದ ಇಳಿಯುವುದು ಉತ್ತಮ’ ಎಂದು ಅವರು ಹೇಳಿದ್ದಾರೆ. ‘ನನಗೆ ನನ್ನ ಕುಟುಂಬದಿಂದ ಅಪಾರ ಬೆಂಬಲ ಸಿಕ್ಕಿದೆ. ನನಗೆ ಡಿವೋರ್ಸ್ ಬಗ್ಗೆ ಯಾವುದೇ ವಿಷಯ ಇಲ್ಲ. ನಾನು ಖುಷಿಯಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.

ವಿಚ್ಛೇದನಕ್ಕೆ ತಾಯಿ ಮತ್ತು ಸಹೋದರ ಹೇಗೆ ಪ್ರತಿಕ್ರಿಯಿಸಿದರು ಎಂದು ಕೇಳಿದ್ದಕ್ಕೆ ಹನ್ಸಿಕಾ ನೇರ ಉತ್ತರ ನೀಡಿದ್ದಾರೆ. “ನಾನು ಅನುಭವಿಸಿದ ಕಷ್ಟಗಳನ್ನು ಕುಟುಂಬದವರು ನೋಡಿದ್ದರು. ಸರಿ ಹೊಂದುತ್ತಿಲ್ಲ ಎಂದರೆ ಹೊರಬರುವಂತೆ ಸೂಚಿಸಿದರು. ನಾನು ಸದಾ ಖುಷಿಯಿಂದ ಇರುವ ವ್ತಕ್ತಿ. ಹೀಗಾಗಿ, ಈ ರೀತಿಯ ಕಷ್ಟ ಅನುಭವಿಸುವುದು ಭಯ ತರುತ್ತದೆ. ನನ್ನ ಹಾಗೂ ಸೋಹೈಲ್ ಮಧ್ಯೆ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ತಿಳಿಯದಿರುವುದೇ ಉತ್ತಮ” ಎಂದು ಹನ್ಸಿಕಾ ಹೇಳಿದ್ದಾರೆ.

ಸದ್ಯಕ್ಕೆ ಹನ್ಸಿಕಾಗೆ ಮದುವೆ ಆಗುವ ಆಲೋಚನೆ ಇಲ್ಲ. ಮುಂದೆ ವಿಧಿ ಹೇಗೆ ಕರೆದುಕೊಂಡು ಹೋಗುತ್ತದೆಯೋ ಹಾಗೆ ಹೋಗುವ ಆಲೋಚನೆಯಲ್ಲಿ ಅವರಿದ್ದಾರೆ.

error: Content is protected !!