ಹಾಸ್ಯ ಪ್ರಹಸನಕ್ಕೆ ಶುರುವಾಯ್ತು ವಿವಾದದ ಬಣ್ಣ: ಸುಂದರ ರೈ ಮಂದಾರ ತಂಡಕ್ಕೆ ಬೆದರಿಕೆ; “ಬುರುಡೆ ಗ್ಯಾಂಗ್ ಅಂದ್ರೆ ಅಷ್ಟೊಂದು ಸಿಟ್ಟೇಕೆ?”

ಮಂಗಳೂರು: ಕರಾವಳಿಯ ಕಲೆ ಯಕ್ಷಗಾನದ ಅಂಗಳದಲ್ಲಿ ಈಗ ಹೊಸ ವಿವಾದ ಸೃಷಿಯಾಗಿದ್ದು ಅದೀಗ ಪೊಲೀಸ್ ಮೆಟ್ಟಿಲೇರಿದೆ. ಸ್ಥಳೀಯ ವಾಹಿನಿಯಲ್ಲಿ ಪ್ರಸಾರವಾದ ʻಯಕ್ಷ ತೆಲಿಕೆ’ ಸರಣಿಯ ʻಬುರುಡೆ ಗ್ಯಾಂಗ್’ ಎಂಬ ಹಾಸ್ಯ ಪ್ರಸಂಗ ಈಗ ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡಿದೆ. ಈ ವಿಚಾರವಾಗಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ತಮಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಖ್ಯಾತ ಕಲಾವಿದರಾದ ಸುಂದರ ರೈ ಮಂದಾರ ಮತ್ತು ಪ್ರಜ್ವಲ್ ಕುಮಾರ್ ಪೊಲೀಸ್ ಠಾಣೆಯ ಬಾಗಿಲು ತಟ್ಟಿದ್ದಾರೆ.

ಆರು ತಿಂಗಳ ನಂತರ ಭುಗಿಲೆದ್ದ ವಿವಾದ:
ವಿಷಯ ಏನೆಂದರೆ, ಈ ʻಬುರುಡೆ ಗ್ಯಾಂಗ್’ ಪ್ರಹಸನ ಪ್ರಸಾರವಾಗಿದ್ದು ಕಳೆದ ವರ್ಷದ ನವೆಂಬರ್‌ನಲ್ಲಿ! ಆದರೆ, ಆರು ತಿಂಗಳ ನಂತರ ಎಪ್ರಿಲ್ 11ರಂದು ಮಹೇಶ್ ಶೆಟ್ಟಿ ತಿಮರೋಡಿ ಅವರು ಕಲಾವಿದ ಪ್ರಜ್ವಲ್ ಕುಮಾರ್‌ಗೆ ಕರೆ ಮಾಡಿ ತಾಯಿ ಬಗ್ಗೆಯೂ ಕೆಟ್ಟದಾಗಿ ನಿಂದಿಸಿದ್ದಾರೆ ಎಂಬುದು ಕಲಾವಿದರ ದೂರು. “ನನ್ನ ಬಗ್ಗೆಯೂ ಇಲ್ಲಸಲ್ಲದ ಆರೋಪ ಮಾಡಿದ್ದಾರೆ” ಎಂದು ಸುಂದರ ರೈ ಮಂದಾರ ಆಕ್ರೋಶ ಹೊರಹಾಕಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಜ್ವಲ್ ಕುಮಾರ್, “ಒಂದು ಹೆಣ್ಣಿನ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇನೆ ಎನ್ನುವ ವ್ಯಕ್ತಿ, ಇನ್ನೊಬ್ಬ ಹೆಣ್ಣುಮಗಳ (ತಾಯಿ) ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡುತ್ತಾರಲ್ಲಾ, ಇದು ಸರಿಯೇ?” ಎಂದು ನೇರ ಪ್ರಶ್ನೆ ಹಾಕಿದ್ದಾರೆ. ತಾವು ಮಾಡಿದ ಪ್ರಹಸನಕ್ಕೂ ಇಲ್ಲಿ ನಡೆಯುತ್ತಿರುವ ಯಾವುದೇ ಹೋರಾಟಗಳಿಗೂ ಸಂಬಂಧವಿಲ್ಲದಿದ್ದರೂ, ತಿಮರೋಡಿ ಅವರು ತಮಗೆ ತಾವೇ ಅದನ್ನು ಅನ್ವಯಿಸಿಕೊಂಡು ಗಲಾಟೆ ಮಾಡುತ್ತಿದ್ದಾರೆ ಎನ್ನುವುದು ಕಲಾವಿದರ ವಾದ.

ಇನ್ನೊಬ್ಬ ಕಲಾವಿದ ದಿನೇಶ್ ಕೊಡಪದವು ಮಾತನಾಡಿ, “ಬುರುಡೆ ಗ್ಯಾಂಗ್ ಅಂದ ತಕ್ಷಣ ತಿಮರೋಡಿ ಅವರಿಗೆ ಕೋಪ ಬರುತ್ತದೆ ಎಂದರೆ, ಅವರೇ ಆ ಗ್ಯಾಂಗ್‌ನ ಸದಸ್ಯರು ಅಂತ ಅರ್ಥ ಮಾಡಿಕೊಳ್ಳಬೇಕಾಗುತ್ತದೆ” ಎಂದು ಟಾಂಗ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮಗೆ ಬೆದರಿಕೆಗಳು ಬರುತ್ತಿದ್ದು, ಕಾನೂನಿನ ಮೂಲಕ ನ್ಯಾಯ ಪಡೆಯುತ್ತೇವೆ ಎಂದು ಕಲಾವಿದರ ತಂಡ ಸವಾಲು ಹಾಕಿದೆ.

ಪತ್ರಿಕಾಗೋಷ್ಠಿಯಲ್ಲಿ ಭಾಗವತ ಧೀರಜ್ ರೈ ಸಂಪಾಜೆ ಕೂಡ ಉಪಸ್ಥಿತರಿದ್ದು ಕಲಾವಿದರ ಹೋರಾಟಕ್ಕೆ ಸಾಥ್ ನೀಡಿದ್ದಾರೆ. ಸದ್ಯ ಪುತ್ತೂರು ಗ್ರಾಮಾಂತರ ಮತ್ತು ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದ್ದು, ʻಯಕ್ಷ’ ಲೋಕದ ಈ ಜಗಳ ಎಲ್ಲಿಗೆ ಹೋಗಿ ನಿಲ್ಲುತ್ತದೋ ಕಾದು ನೋಡಬೇಕು.

error: Content is protected !!