ಏ.19ರ ಅಕ್ಷಯ ತೃತೀಯದಂದು ಶ್ರೀಕೃಷ್ಣ ಬಲರಾಮರ ಭವ್ಯ ರಥಯಾತ್ರೆ

ಮಂಗಳೂರು: ನಗರದ ಪಿವಿಎಸ್‌ ಕಲಾಕುಂಜದಲ ಶ್ರೀ ಜಗನ್ನಾಥ ಮಂದಿರ (ಇಸ್ಕಾನ್) ವತಿಯಿಂದ ಏಪ್ರಿಲ್ 19ರ ಭಾನುವಾರ ಅಕ್ಷಯ ತೃತೀಯ ಮತ್ತು ಶ್ರೀ ಶ್ರೀಕೃಷ್ಣ ಬಲರಾಮರ ಭವ್ಯ ರಥಯಾತ್ರೆಯನ್ನು ಆಯೋಜಿಸಲಾಗಿದೆ ಎಂದು ಇಸ್ಕಾನ್ ಮಂಗಳೂರು ಶಾಖೆಯ ಅಧ್ಯಕ್ಷರಾದ ಶ್ರೀ ಗುಣಕರ ರಾಮದಾಸ ಮಾಹಿತಿ ನೀಡಿದರು.

ಅವರು ದೇಗುಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ಷಯ ತೃತೀಯದ ಶುಭ ಸಂದರ್ಭದಲ್ಲಿ ಅಂದು ಬೆಳಿಗ್ಗೆಯಿಂದಲೇ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ 7:15ಕ್ಕೆ ವಿಶೇಷ ಶೃಂಗಾರ ಆರತಿ ಹಾಗೂ ಭಜನಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5:00 ಗಂಟೆಗೆ ಲೋಕ ಕಲ್ಯಾಣಕ್ಕಾಗಿ ಮತ್ತು ಭಕ್ತರ ಸಮೃದ್ಧಿಗಾಗಿ ‘ಮಹಾಲಕ್ಷ್ಮಿ ಹೋಮ’ವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಂಜೆ 7:00 ಗಂಟೆಗೆ ಶ್ರೀ ಶ್ರೀ ಕೃಷ್ಣ ಬಲರಾಮರ ಭವ್ಯ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಸುಂದರವಾಗಿ ಅಲಂಕೃತಗೊಂಡ ರಥದಲ್ಲಿ ಭಗವಂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಭಜನೆ ಮತ್ತು ಸಂಕೀರ್ತನೆಯೊಂದಿಗೆ ಮಂದಿರದ ಆವರಣದಲ್ಲಿ ರಥೋತ್ಸವ ನಡೆಯಲಿದೆ. ಈ ರಥಯಾತ್ರೆಯಲ್ಲಿ ಭಕ್ತರು ಸ್ವತಃ ರಥವನ್ನು ಎಳೆಯುವ ಮೂಲಕ ಪುನೀತರಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ನುಡಿದರು.

ರಥಯಾತ್ರೆಯ ಅಂಗವಾಗಿ ಸಂಜೆ 6:00 ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8:15ಕ್ಕೆ ಶಯನ ಆರತಿಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯಗೊಳ್ಳಲಿದ್ದು, ತದನಂತರ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ‘ಮಹಾಪ್ರಸಾದ’ ವಿತರಣೆ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಬೇಕೆಂದು ಸ್ವಾಮೀಜಿ ವಿನಂತಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಇಸ್ಕಾನ್ ಉಪಾಧ್ಯಕ್ಷರಾದ ಶ್ರೀ ಸನಂದನ ದಾಸ ಮತ್ತು ಸಂಯೋಜಕರಾದ ಶ್ರೀ ಸುಂದರ ಗೌರ ದಾಸ ಉಪಸ್ಥಿತರಿದ್ದರು.

error: Content is protected !!