ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ʻಮರಳು’ ಗಂಡಾಂತರ: ಗುತ್ತಿಗೆದಾರರ ಬದುಕು ಈಗ ಬೀದಿಗೆ!

ಮಂಗಳೂರು: ಅತ್ತ ರೇಟ್ ಏರುತ್ತಿದೆ, ಇತ್ತ ಮರಳು ಸಿಗುತ್ತಿಲ್ಲ! ಮಂಗಳೂರಿನ ನಿರ್ಮಾಣ ಲೋಕದ ಅಡಿಪಾಯವೇ ಈಗ ಅಲುಗಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ಮರಳಿನ ತೀವ್ರ ಅಭಾವದ ವಿರುದ್ಧ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ (CCA) ಅಧ್ಯಕ್ಷ ಮಹಾಬಲ ಕೊಟ್ಟಾರಿ ಅವರು ಪ್ರೆಸ್‌ಕ್ಲಬ್‌ನಲ್ಲಿ ಅಬ್ಬರಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮತ್ತು M-Sand ಕೊರತೆ ಭೂತದಂತೆ ಕಾಡುತ್ತಿದೆ. “ಹಿಂದೆ ಜಿಲ್ಲೆಯ ಎಲ್ಲೆಡೆ ಸುಲಭವಾಗಿ ಸಿಗುತ್ತಿದ್ದ ಮರಳು ಈಗ ಚಿನ್ನದಷ್ಟೇ ದುಬಾರಿಯಾಗಿದೆ. CRZ ವಲಯದಲ್ಲಿ ಮರಳುಗಾರಿಕೆಗೆ ಇರುವ ತಾಂತ್ರಿಕ ಅಡೆತಡೆಗಳು ಮತ್ತು ಗುಣಮಟ್ಟದ ಮರಳಿನ ಲಭ್ಯತೆ ಇಲ್ಲದಿರುವುದು ನಮ್ಮನ್ನು ಹೈರಾಣಾಗಿಸಿದೆ” ಎಂದು ಕೊಟ್ಟಾರಿ ಬೇಸರ ವ್ಯಕ್ತಪಡಿಸಿದರು. ಮರಳಿನ ಅಭಾವದಿಂದಾಗಿ ನೂರಾರು ಕಾಮಗಾರಿಗಳು ಅರ್ಧಕ್ಕೆ ನಿಂತು ಹೋಗಿದ್ದು, ಕಾರ್ಮಿಕರು ಕೆಲಸವಿಲ್ಲದೆ ಪರದಾಡುವಂತಾಗಿದೆ ಎಂದರು.

ಮರಳು ಮಾತ್ರವಲ್ಲ, ಜಲ್ಲಿ (Solid blocks), ಸಿಮೆಂಟ್ ಮತ್ತು ಕಬ್ಬಿಣದ ಬೆಲೆಯೂ ಬೇಕಾಬಿಟ್ಟಿ ಏರುತ್ತಿದೆ. “ಈ ಹಿಂದೆ ಒಪ್ಪಿಕೊಂಡಿರುವ ದರದಲ್ಲಿ ಕಾಮಗಾರಿ ಮುಗಿಸುವುದು ಈಗ ಅಸಾಧ್ಯವಾಗಿದೆ. ಒಂದು ಕಡೆ ಸಾಲದ ಕಂತು ಕಟ್ಟಲಾಗದೆ, ಇನ್ನೊಂದು ಕಡೆ ಕಾರ್ಮಿಕರಿಗೆ ಕೂಲಿ ನೀಡಲಾಗದೆ ಗುತ್ತಿಗೆದಾರರು ಕಂಗಾಲಾಗಿದ್ದಾರೆ. ಸರ್ಕಾರದ ಅವೈಜ್ಞಾನಿಕ ನಿಯಮಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ,” ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.

ಜಿಲ್ಲೆಯ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಹೊರರಾಜ್ಯದ ಕಾರ್ಮಿಕರು ಕೆಲಸವಿಲ್ಲದೆ ತಮ್ಮ ಊರುಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದ್ದು, ಮನೆ ಕಟ್ಟುವ ಕನಸು ಹೊತ್ತ ಸಾಮಾನ್ಯ ಜನರಿಗೂ ಬರೆ ಬಿದ್ದಂತಾಗಿದೆ. “ಇದೇ ಪರಿಸ್ಥಿತಿ ಮುಂದುವರಿದರೆ ಜಿಲ್ಲೆಯ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವುದು ಗ್ಯಾರಂಟಿ” ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಕೂಡಲೇ ಜಿಲ್ಲಾಡಳಿತ ಮತ್ತು ಸರ್ಕಾರ ಎಚ್ಚೆತ್ತುಕೊಂಡು ಮರಳು ನೀತಿಯನ್ನು ಸರಳೀಕರಿಸಬೇಕು ಮತ್ತು ಕಚ್ಚಾ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮಹಾಬಲ ಕೊಟ್ಟಾರಿ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅಸೋಷಿಯೇಶನ್‌ನ ದಿನಕ ಸುವರ್ಣ, ಅಶೋಕ್‌ ಕುಲಾಲ್, ಲಕ್ಷ್ಮಿಪ್ರಸಾದ್‌, ಸುರೇಶ್‌ ಜೆ. ಉಪಸ್ಥಿತರಿದ್ದರು.

error: Content is protected !!