
ತಿರುವನಂತಪುರಂ: ರಸ್ತೆ ಕಾಮಗಾರಿಗಾಗಿ ನಿಲ್ಲಿಸಲಾಗಿದ್ದ ಕ್ರೇನ್‌ಗೆ ಶಾಲಾ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಶಿಕ್ಷಕಿಯರು ಸೇರಿದಂತೆ ಶಾಲಾ ಸಿಬ್ಬಂದಿ ಗಾಯಗೊಂಡ ಘಟನೆ ಇಂದು(ಏ.16) ಬೆಳಿಗ್ಗೆ 11 ಗಂಟೆ ಸುಮಾರಿಗೆ ನವಾಯಿಕುಲಂನಲ್ಲಿ ನಡೆದಿದೆ.

ನಾಗರೂರ್ ನಿವಾಸಿ ಶಾಜಿ ಮೃತ ಚಾಲಕ.
ಅಯಿರೂರ್‌ನ ಎಂಜಿಎಂ ಮಾಡೆಲ್ ಸ್ಕೂಲ್‌ಗೆ ಸೇರಿದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ನಿಲ್ಲಿಸಲಾಗಿದ್ದ ಕ್ರೇನ್‌ಗೆ ವೇಗವಾಗಿ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ವ್ಯಾನ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಸಮಯದಲ್ಲಿ ವ್ಯಾನ್‌ನಲ್ಲಿ ಮಕ್ಕಳಿಲ್ಲದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಶಾಜಿ ಅವರನ್ನು ತಕ್ಷಣವೇ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರೂ, ಅಷ್ಟರಲ್ಲೇ ಅವರು ಮೃತಪಟ್ಟಿರುವುದಾಗಿ ಎಂದು ವೈದ್ಯರು ತಿಳಿಸಿದ್ದಾರೆ.
ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕಿಯರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕಲ್ಲಂಬಲಂ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.