
ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಬೇಸತ್ತು ಮಗಳನ್ನು ಉಸಿರುಗಟ್ಟಿಸಿ ಕೊಂದ ಬಳಿಕ ತಾಯಿಯೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೈಟ್‌ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ಮಂಗಳವಾರ(ಏ.14) ನಡೆದಿದೆ.
ಇಮ್ಮಡಿಹಳ್ಳಿ ನಿವಾಸಿ ತಾರುಣ್ಯ(13) ಕೊಲೆಯಾದ ಮಗಳು, ಸುವರ್ಣ(45) ಮಗಳನ್ನೇ ಕೊಂದು ಬಳಿಕ ಆತ್ಮಹತ್ಯೆಗೆ ಶರಣಾದ ತಾಯಿ.

ದಂಪತಿಯ ಹಿರಿಯ ಪುತ್ರ ಎಸ್ಸೆಸ್ಸೆಲ್ಸಿ ಓದುತ್ತಿದ್ದು, ಹಾಸ್ಟೆಲ್‌ನಲ್ಲಿದ್ದಾನೆ. ಮಗಳು ನಗರದ ಖಾಸಗಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ಸೋಮವಾರ ರಾತ್ರಿ ಐಪಿಎಲ್ ಪಂದ್ಯ ನೋಡಿ ದಂಪತಿ ಒಟ್ಟಿಗೆ ಊಟ ಮಾಡಿದ್ದಾರೆ. ಮಲಗುವ ಮೊದಲು ಸುವರ್ಣಾ, ತನಗೆ ತಲೆನೋವು ಹಾಗೂ ಸುಸ್ತು ಇದೆ. ಬೆಳಗ್ಗೆ ತಿಂಡಿ ಮಾಡಲು ಆಗಲ್ಲ ಎಂದು ಹೇಳಿದ್ದರು. ಹೀಗಾಗಿ ಪ್ರತ್ಯೇಕ ಕೊಠಡಿಯಲ್ಲಿ ಮಲಗಿದ್ದ ಚಂದ್ರಶೇಖರ್, ಬೆಳಗ್ಗೆ ಪತ್ನಿಯೊಂದಿಗೆ ಮಾತನಾಡದೆ ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ. ಬೆಳಗ್ಗೆ 10 ಗಂಟೆ ಸುಮಾರಿಗೆ ಪತ್ನಿಗೆ ಕರೆ ಮಾಡಿದ್ದರು. ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ, ಅನುಮಾನಗೊಂಡು ಸಹೋದರ ವಿನೋದ್‌ಗೆ ಮನೆಗೆ ಹೋಗಿ ಬರುವಂತೆ ಸೂಚಿಸಿದ್ದರು. ಸಹೋದರ ಮನೆಗೆ ಹೋಗಿ ಬಾಗಿಲು ಬಡಿದರೂ ಬಾಗಿಲು ತೆರೆದಿಲ್ಲ. ಅನುಮಾನಗೊಂಡು ಬಾಗಿಲು ಹೊಡೆದು ನೋಡಿದಾಗ ಘಟನೆ ಬಳಕಿಗೆ ಬಂದಿದೆ.

ಪತಿ ಚಂದ್ರಶೇಖರ್‌ಗೆ ಹೃದಯ ಸಮಸ್ಯೆಯಿದ್ದು, ಬರುತ್ತಿದ್ದ ವೇತನದಿಂದ ಜೀವನ ನಿರ್ವಹಣೆಗೆ ಸಾಧ್ಯವಾಗುತ್ತಿರಲಿಲ್ಲ. ಜತೆಗೆ ಮುಂದಿನ ಭವಿಷ್ಯದ ಬಗ್ಗೆ ಸವರ್ಣಾ ಚಿಂತಿತಳಾಗಿ ಕೆಲ ತಿಂಗಳಿಂದ ಮಾನಸಿಕ ಖನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಇದೇ ಆಂತಕದಿಂದ ಪುತ್ರಿಯನ್ನು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮನೆಯ ಕೊಠಡಿಯ ಮಂಚದ ಮೇಲೆ ತಾರಣ್ಯ ಉಸಿರುಗಟ್ಟಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಪತ್ತೆಯಾದರೆ, ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಸುವರ್ಣಾ ಮೃತದೇಹ ಪತ್ತೆಯಾಗಿದೆ. ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ. ಸಂಪೂರ್ಣ ತನಿಖೆಯ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ವೈಟ್‌ಫೀಲ್ಡ್ ಠಾಣೆಯಲ್ಲಿ ಸುವರ್ಣಾ ಪತಿ ಚಂದ್ರಶೇಖರ್ ಎಂಬುವರು ನೀಡಿದ ದೂರಿನ ಮೇರೆಗೆ ಸುವರ್ಣಾ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಹಾಗೆಯೇ ಸುವರ್ಣಾ ಸಹೋದರ ಮಂಜುನಾಥ್ ಎಂಬವರು ನೀಡಿದ ದೂರಿನ ಮೇರೆಗೆ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.