
ವಿಟ್ಲ: ಪಡ್ನೂರು ಗ್ರಾಮದ ಕೋಡಪದವು ಪ್ರದೇಶದಲ್ಲಿ ನಡೆದ ಮಗುವಿನ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಭಾವಚಿತ್ರ ಕುರಿತು ಪೊಲೀಸರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

ಘಟನೆಯ ವಿವರಗಳ ಪ್ರಕಾರ, ಮನೆ ಮುಂಭಾಗದಲ್ಲಿ ಆಟವಾಡುತ್ತಿದ್ದ 7 ವರ್ಷದ ಮಗುವಿನ ಕುತ್ತಿಗೆಯಲ್ಲಿದ್ದ ಸುಮಾರು 7 ಗ್ರಾಂ ತೂಕದ ಚಿನ್ನದ ಸರವನ್ನು ಕೆ.ಟಿ.ಎಂ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೋರ್ವ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 91/2026, ಕಲಂ 309(4) BNS 2023 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗುತ್ತಿದೆ.
ವಿಟ್ಲ: ಮಗುವಿನ ಕತ್ತಲ್ಲಿದ್ದ ಚಿನ್ನ ಕದ್ದು ಬೈಕ್‌ನಲ್ಲಿ ಪರಾರಿಯಾದ ಖದೀಮ!!

ಇದೀಗ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಟಿ.ಎಂ ಬೈಕ್ ಸವಾರನೊಬ್ಬನ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಆತನೇ ಆರೋಪಿಯೆಂದು ಊಹಿಸಲಾಗುತ್ತಿದೆ. ಆದರೆ, ಈ ಬಗ್ಗೆ ತನಿಖೆ ನಡೆಸಿದ ವಿಟ್ಲ ಪೊಲೀಸರು, ಆ ಬೈಕ್ ಸವಾರನನ್ನು ವಿಚಾರಣೆಗೊಳಪಡಿಸಿದ್ದು, ಈತನಿಗೂ ಘಟನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.

ಕುಟುಂಬದವರ ಮನವಿಯ ಮೇರೆಗೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದು, ಆ ವ್ಯಕ್ತಿಯ ಕುರಿತು ಯಾವುದೇ ನಕಾರಾತ್ಮಕ ಅಭಿಪ್ರಾಯ ಅಥವಾ ತಪ್ಪು ಕಲ್ಪನೆಗಳನ್ನು ಹೊಂದಬಾರದು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಪ್ರಸ್ತುತ, ನಿಜವಾದ ಆರೋಪಿಯನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.