ತೊಕ್ಕೊಟ್ಟು ಆರಿಫ್ ಕೊಲೆ ಪ್ರಕರಣ: ಮತ್ತೆ ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ಉಳ್ಳಾಲ: ತೊಕ್ಕೊಟ್ಟುವಿನಲ್ಲಿ ಸಂಭವಿಸಿದ್ದ ಟ್ಯಾಬ್ಲೆಟ್‌ ಆರಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು, ಮತ್ತೆ ಮೂವರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಅರ್ಷದ್, ಪುಚ್ಚೆ ನಿಸಾಕ್ ಮತ್ತು ಜುನೈದ್ ಪೊಲೀಸ್‌ ವಶವಾದ ಆರೋಪಿಗಳು. ಆರಿಫ್ ಕೊಲೆಯ ಸಂಚು ರೂಪಿಸುವಲ್ಲಿ ಮತ್ತು ದಾಳಿಯ ಸಮಯದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಶಂಕೆಯ ಮೇರೆಗೆ ಇವರನ್ನು ವಿಚಾರಣೆಗೊಳಪಡಿಸಲಾಗಿದೆ.

ನಿಮ್ಮ ಎಲ್ಲಾ ರೀತಿಯ ಡಾಕ್ಯುಮೆಂಟೇಶನ್ ಮತ್ತು ಲೀಗಲ್ ಸರ್ವಿಸ್‌ ಅಗತ್ಯತೆಗಾಗಿ ಈಗಲೇ ಈ ಲಿಂಕ್ ಅನ್ನು ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಿ.

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಗಳ ಪೈಕಿ ಅರ್ಷದ್ ಕೊಲೆಗಾರರಿಗೆ ಅಗತ್ಯವಿದ್ದ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದಲ್ಲದೆ, ಕೃತ್ಯದ ಸಮಯದಲ್ಲಿ ಪೊಲೀಸರ ಚಲನವಲನಗಳ ಬಗ್ಗೆ ನಿರಂತರ ಮಾಹಿತಿ ನೀಡುತ್ತಿದ್ದ. ಜೊತೆಗೆ ಆರೋಪಿಗಳಿಗೆ ವಾಹನ ಸಾರಿಗೆ ಮತ್ತು ಹಣಕಾಸಿನ ನೆರವು ಒದಗಿಸಿದ್ದ ಎನ್ನಲಾಗಿದೆ.

ಪುಚ್ಚೆ ನಿಸಾಕ್ ಈ ಹಿಂದೆಯೇ ಆರಿಫ್ ಮೇಲೆ ನಡೆದಿದ್ದ ದಾಳಿಗಳಲ್ಲಿ ಶಾಮೀಲಾಗಿದ್ದ. ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಆರಿಫ್ ಕೊಲೆ ಯತ್ನ ಪ್ರಕರಣದಲ್ಲಿ ಈತ ಭಾಗಿಯಾಗಿದ್ದಲ್ಲದೆ, 2022ರಲ್ಲಿ ನಡೆದಿದ್ದ ದಾಳಿಯಲ್ಲೂ ಈತನ ಪಾತ್ರವಿತ್ತು ಎಂದು ತಿಳಿದುಬಂದಿದೆ. ಜುನೈದ್ ಕೃತ್ಯ ಎಸಗಲು ಆರೋಪಿಗಳಿಗೆ ವಾಹನವನ್ನು ಒದಗಿಸಿದ್ದ. ಅಲ್ಲದೆ, ಫೆಬ್ರವರಿಯಲ್ಲಿ ಆರಿಫ್ ಹತ್ಯೆಗೆ ಸಂಚು ರೂಪಿಸಿದ್ದ ತಂಡದ ಸಕ್ರಿಯ ಸದಸ್ಯನಾಗಿದ್ದ ಎಂದು ತಿಳಿಸಿದ್ದಾರೆ.

ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ.

error: Content is protected !!