ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ; ನಾಲ್ವರು ವಶ- ಪೊಲೀಸರಿಗೆ ಬೆದರಿಕೆ ಹಾಕಿ ಇಬ್ಬರು ಪರಾರಿ

ವಿಟ್ಲ: ಹಣವನ್ನು ಪಣವಾಗಿಟ್ಟು ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದು, ನಾಲ್ವರನ್ನು ಬಂಧಿಸಿರುವ ಘಟನೆ ವಿಟ್ಲಕಸಬ ಗ್ರಾಮದ ಮಾಡ ಎಂಬಲ್ಲಿ ಭಾನುವಾರ ಸಂಜೆ ನಡೆದಿದೆ. ಅಲ್ಲದೆ ಆರೋಪಿಗಳು ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.

ಭಾನುವಾರ ಸಂಜೆ ಮಾಡ ಎಂಬಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ವಿಟ್ಲ ಪೊಲೀಸ್ ಉಪನಿರೀಕ್ಷಕ ರಾಮಕೃಷ್ಣ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಅವರು ಸಿಬ್ಬಂದಿಗಯೊಂದಿಗೆ ಸ್ಥಳಕ್ಕೆ ತೆರಳಿದಾಗ, ಸುಮಾರು 20 ರಿಂದ 25 ಜನರ ತಂಡ ಹಣವನ್ನು ಪಣವಾಗಿಟ್ಟು ಜೂಜಾಟದಲ್ಲಿ ತೊಡಗಿರುವುದು ಕಂಡುಬಂದಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಪೊಲೀಸರನ್ನು ಕಂಡ ಜೂಜುಕೋರರು ಓಡಲು ಪ್ರಯತ್ನಿಸಿದ್ದು, ಈ ಪೈಕಿ ವಿಟ್ಲಕಸಬದ ಚಂದ್ರಶೇಖರ (43), ಇಬ್ರಾಹಿಂ (65), ಹೊನ್ನಪ್ಪ (46) ಹಾಗೂ ವಿಟ್ಲಪಡ್ನೂರಿನ ಚಂದ್ರಹಾಸ (32) ಎಂಬುವವರನ್ನು ಪೊಲೀಸರು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇದೇ ವೇಳೆ ಆರೋಪಿಗಳಾದ ಬಾಬಣ್ಣ ಮತ್ತು ಹೊನ್ನಪ್ಪ ಹರಿಜನ ಎಂಬುವವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಬೆದರಿಕೆ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾಗಿ ಆರೋಪಿಸಲಾಗಿದೆ.

ದಾಳಿಯ ವೇಳೆ ಜೂಜಾಟಕ್ಕೆ ಬಳಸಲಾಗಿದ್ದ 3 ಕೋಳಿಗಳು, 1,000 ರೂ. ನಗದು ಹಾಗೂ ಇತರೆ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 90/2026 ರಂತೆ ಕರ್ನಾಟಕ ಪೊಲೀಸ್ ಕಾಯ್ದೆ, ಪ್ರಾಣಿ ಹಿಂಸೆ ತಡೆ ಕಾಯ್ದೆ ಹಾಗೂ ಬಿಎನ್ಎಸ್ (BNS 2023) ಅಡಿಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

error: Content is protected !!