ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತಾರಕಕ್ಕೇರಿದ್ದು, ಅಮೆರಿಕದ ಮಿಲಿಟರಿ ಕಮಾಂಡ್ (CENTCOM) ಇಂದು ಸಂಜೆಯಿಂದಲೇ ಹಾರ್ಮುಜ್ ಜಲಸಂಧಿಯಲ್ಲಿ ನೌಕಾ ದಿಗ್ಬಂಧನವನ್ನು ಜಾರಿಗೆ ತರುತ್ತಿದೆ. ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆಗಳು ಸಂಪೂರ್ಣವಾಗಿ ವಿಫಲವಾದ ಬೆನ್ನಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ಭಾರತೀಯ ಕಾಲಮಾನ ಇಂದು ಸಂಜೆ 7:30ಕ್ಕೆ (ಅಮೆರಿಕ ಕಾಲಮಾನ ಬೆಳಿಗ್ಗೆ 10 ಗಂಟೆ) ಈ ದಿಗ್ಬಂಧನ ಪ್ರಕ್ರಿಯೆ ಆರಂಭವಾಗಲಿದೆ. ಈ ಕಾರ್ಯಾಚರಣೆಯು ಕೇವಲ ಇರಾನ್‌ನ ಬಂದರುಗಳಿಗೆ ಹೋಗುವ ಮತ್ತು ಅಲ್ಲಿಂದ ಬರುವ ಹಡಗುಗಳಿಗೆ ಮಾತ್ರ ಸೀಮಿತವಾಗಿರಲಿದೆ. ಸೌದಿ ಅರೇಬಿಯಾ, ಯುಎಇ ಮತ್ತು ಕತಾರ್‌ನಂತಹ ಅಮೆರಿಕದ ಮಿತ್ರ ರಾಷ್ಟ್ರಗಳ ಹಡಗುಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ಸೇನೆ ಸ್ಪಷ್ಟಪಡಿಸಿದೆ.

ಅಮೆರಿಕದ ಈ ನಿರ್ಧಾರದಿಂದಾಗಿ ಇರಾನ್‌ನಿಂದ ಅತಿ ಹೆಚ್ಚು ತೈಲ ಖರೀದಿಸುವ ಚೀನಾಗೆ ಭಾರಿ ಸಂಕಷ್ಟ ಎದುರಾಗಲಿದೆ. ಚೀನಾ ತನ್ನ ತೈಲ ಅಗತ್ಯದ ಶೇ. 90ರಷ್ಟು ಭಾಗವನ್ನು ಇರಾನ್‌ನಿಂದಲೇ ಪೂರೈಸಿಕೊಳ್ಳುತ್ತಿದ್ದು, ಈ ದಿಗ್ಬಂಧನದಿಂದಾಗಿ ಚೀನಾದ ಇಂಧನ ಪೂರೈಕೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಇದು ಪರೋಕ್ಷವಾಗಿ ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಸಮರಕ್ಕೂ ನಾಂದಿ ಹಾಡಿದೆ.

ಈ ಬೆಳವಣಿಗೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದೆ. ಭಾರತದಲ್ಲಿಯೂ ಇದರ ಪರಿಣಾಮ ಕಂಡುಬಂದಿದ್ದು, ಶೇರು ಮಾರುಕಟ್ಟೆ ಕುಸಿದಿದೆ ಮತ್ತು ರೂಪಾಯಿ ಮೌಲ್ಯವು ಡಾಲರ್ ಎದುರು 93.32 ಕ್ಕೆ ಕುಸಿಯುವ ಮೂಲಕ ಆತಂಕ ಮೂಡಿಸಿದೆ. ಒಂದು ವೇಳೆ ಇರಾನ್ ಪ್ರತಿಯಾಗಿ ಜಲಸಂಧಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದರೆ ಜಾಗತಿಕ ಇಂಧನ ಬಿಕ್ಕಟ್ಟು ಎದುರಾಗಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಇತ್ತ ಇರಾನ್ ಸಂಸತ್ತಿನ ಸ್ಪೀಕರ್ ಘಾಲಿಬಾಫ್ ಅವರು ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಪ್ರಚೋದನೆಯಿಂದಾಗಿ ಅಮೆರಿಕ ಮಾತುಕತೆಯಿಂದ ಹಿಂದೆ ಸರಿದಿದೆ ಎಂದು ಆರೋಪಿಸಿದ್ದಾರೆ. ಅಮೆರಿಕದ ದಾಳಿಯ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಇರಾನ್, “ಅಮೆರಿಕವು ಈ ನಡೆಯಿಂದಾಗಿ ಮುಂದೆ ದೊಡ್ಡ ದುರಂತವನ್ನು ಎದುರಿಸಬೇಕಾಗುತ್ತದೆ” ಎಂದು ತಿರುಗೇಟು ನೀಡಿದೆ.