ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ವಾರ್ಡ್‌ನ ಸಂತೋಷ್ ನಗರ ಆಟದ ಮೈದಾನದಿಂದ RTO ಟೆಸ್ಟ್ ಯಾರ್ಡ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ಉತ್ತರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಇಂದು ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.


ಮಹಾನಗರ ಪಾಲಿಕೆಯ 25 ಲಕ್ಷ ರೂ. ಅನುದಾನದಲ್ಲಿ ಈ ರಸ್ತೆಯು ಅಭಿವೃದ್ಧಿಗೊಳ್ಳುತ್ತಿದ್ದು, ಸ್ಥಳೀಯರ ಬಹುದಿನಗಳ ಬೇಡಿಕೆಯು ಈ ಮೂಲಕ ಈಡೇರಿದಂತಾಗಿದೆ.
ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, “ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿ ನಾವು ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಈಗಾಗಲೇ ಈ ವಾರ್ಡ್‌ನ ಸಮಗ್ರ ಅಭಿವೃದ್ಧಿಗಾಗಿ 15 ಕೋಟಿ ರೂಪಾಯಿಗಿಂತಲೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲೂ ಪಚ್ಚನಾಡಿ ಭಾಗದಲ್ಲಿ ಮೂಲಭೂತ ಸೌಕರ್ಯಗಳ ವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು,” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಚ್ಚನಾಡಿ ವಾರ್ಡಿನ ನಿಕಟಪೂರ್ವ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್, ಭೂನ್ಯಾಯ ಮಂಡಳಿಯ ಮಾಜಿ ಸದಸ್ಯರಾದ ಸಂದೀಪ್ ಪಚ್ಚನಾಡಿ ಹಾಗೂ ಸ್ಥಳೀಯ ಪ್ರಮುಖರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.