Karnataka By Election: ಇಂದು ದಾವಣಗೆರೆ, ಬಾಗಲಕೋಟೆಯಲ್ಲಿ ಮತದಾನ

Karnataka By Election: ಕರ್ನಾಟಕದ ಬಾಗಲಕೋಟೆ, ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪಚುನಾವಣೆ ಹಾಗೂ ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಇಂದು(ಏಪ್ರಿಲ್ 9) ನಡೆಯುತ್ತಿದೆ. ಕೇರಳದ 140 ಸ್ಥಾನಗಳಿಗೆ, ಅಸ್ಸಾಂನಲ್ಲಿ 126 ಸ್ಥಾನಗಳಿಗೆ ಮತ್ತು ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿಕ್ಕಿದ್ದು, ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸಮರ್ಥ್ ಶಾಮನೂರು, ಬಿಜೆಪಿಯಿಂದ ಶ್ರೀನಿವಾಸ್‌ ದಾಸಕರಿಯಪ್ಪ, ಆಪ್‌ನಿಂದ ಕೆ.ಎಸ್‌.ಶಿವಕುಮಾರಪ್ಪ, ಎಸ್‌ಡಿಪಿಐನಿಂದ ಅಫ್ಸರ್‌ ಕೊಡ್ಲಿಪೇಟೆ ಸೇರಿದಂತೆ ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಕ್ಷೇತ್ರದಲ್ಲಿ 1.13 ಲಕ್ಷ ಪುರುಷರು ,1.17 ಲಕ್ಷ ಮಹಿಳೆಯರು ಹಾಗೂ 43 ಇತರರು ಸೇರಿದಂತೆ ಒಟ್ಟು 2.31 ಲಕ್ಷ ಮತದಾರಿದ್ದಾರೆ. 2,870 ಯುವ, 2,512 ವಿಶೇಷ ಚೇತನ, 85 ವರ್ಷ ಮೇಲ್ಪಂಟಂತಹ 1974, ನೂರು ವರ್ಷಕ್ಕಿಂತ ಮೇಲ್ಪಟ್ಟ 28 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 284 ಮತಗಟ್ಟೆಸ್ಥಾಪಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ 234 ಮತ್ತು ಗ್ರಾಮೀಣ ವ್ಯಾಪ್ತಿಯಲ್ಲಿ 50 ಮತಗಟ್ಟೆಗಳಿವೆ. ವೆಬ್‌ ಕಾಸ್ಟಿಂಗ್‌, ಸಿಸಿಟಿವಿ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಷೇತ್ರದಲ್ಲಿ ಒಟ್ಟು 76 ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚುವರಿ ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ. ಸಖಿ, ವಿಶೇಷ ಚೇತನ, ಪರಿಸರ ಸ್ನೇಹಿ ಮತಗಟ್ಟೆ ಸ್ಥಾಪಿಸಲಾಗಿದೆ. 229 ಮಂದಿ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಅಂಚೆಪತ್ರದ ಮೂಲಕ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಬಾಗಲಕೋಟೆ ಕ್ಷೇತ್ರದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮೇಟಿ ಅವರ ಕಿರಿಯ ಪುತ್ರ ಉಮೇಶ ಮೇಟಿ ಚುನಾವಣೆಗೆ ನಿಂತಿದ್ದು, ಬಿಜೆಪಿಯಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಕಣದಲ್ಲಿದ್ದಾರೆ. ಅಲ್ಲದೇ ಇನ್ನೂ 7 ಜನ ವಿವಿಧ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಒಟ್ಟು 9 ಜನ ಚುನಾವಣೆ ಕಣದಲ್ಲಿದ್ದಾರೆ.

ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬಾಗಲಕೋಟೆ ನಗರ, ಶಿರೂರ, ಕಮತಗಿ, ಅಮೀನಗಡ ಸಹಿತ ನಾಲ್ಕು ನಗರ-ಪಟ್ಟಣಗಳು, ಬಾಗಲಕೋಟೆ ಮತ್ತು ಹುನಗುಂದ ತಾಲೂಕು ವ್ಯಾಪ್ತಿಯ ಒಟ್ಟು 92 ಹಳ್ಳಿಗಳಿವೆ. ಈ ಬಾರಿ ಒಟ್ಟು 1.27 ಲಕ್ಷ ಪುರುಷರು, 1.33 ಲಕ್ಷ ಮಹಿಳೆಯರು, 23 ಜನ ಇತರೆ ಸಹಿತ ಒಟ್ಟು 2.59 ಲಕ್ಷ ಮತದಾರರಿದ್ದಾರೆ.

ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೇ 85 ವರ್ಷ ಮೇಲ್ಪಟ್ಟ 3,017 ಜನ ಮತದಾರರಿದ್ದು, ಅದರಲ್ಲಿ 170 ಜನ ಈಗಾಗಲೇ ಮನೆಯಿಂದಲೇ ಮತದಾನ ಮಾಡಿದ್ದಾರೆ. ನಗರ ಪ್ರದೇಶದಲ್ಲಿ 143, ಗ್ರಾಮೀಣ ಪ್ರದೇಶದಲ್ಲಿ 176 ಬೂತಗಳಿದ್ದು, ಹೆಚ್ಚುವರಿಯಾಗಿ 3 ಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟಾರೆ, ಕ್ಷೇತ್ರದಲ್ಲಿ 322 ಬೂತ್‌ಗಳಲ್ಲಿ ಮತದಾನ ನಡೆಯಲಿದೆ.

error: Content is protected !!