ಮಂಗಳೂರು: ಕೊಂಕಣಿ ಸಂಸ್ಕೃತಿಯ ಪ್ರಮುಖ ಸಂಘಟನೆ ʻಮಾಂಡ್ ಸೊಭಾಣ್’ ತನ್ನ 40ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ನೆನಪಿಗಾಗಿ ಮಂಗಳೂರಿನಲ್ಲಿ ʻಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ’ವನ್ನು ಹಮ್ಮಿಕೊಂಡಿದೆ. ಈ ಬೃಹತ್ ಕಾರ್ಯಕ್ರಮದ ಮುಹೂರ್ತ ಮತ್ತು ಲಾಂಛನ ಬಿಡುಗಡೆಯು ಇದೇ ಏಪ್ರಿಲ್ 10ರಂದು ಶಕ್ತಿನಗರದ ಕಲಾಂಗಣದಲ್ಲಿ ಜರುಗಲಿದೆ ಎಂದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ತಿಳಿಸಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವೆಂಬರ್ 3 ರಿಂದ 15 ರವರೆಗೆ ನಡೆಯಲಿರುವ ಈ ಸಮಾವೇಶದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ ಕಾಲ ನಿರಂತರ ಸಮೂಹ ಗಾಯನ ನಡೆಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಲು ಸಿದ್ಧತೆ ನಡೆಸಲಾಗಿದೆ. ಈ ಐತಿಹಾಸಿಕ ಪ್ರಯತ್ನದಲ್ಲಿ ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಹಾಗೂ ವಿದೇಶಗಳಿಂದಲೂ ಸುಮಾರು 6,000ಕ್ಕೂ ಹೆಚ್ಚು ಹಾಡುಗಾರರು ಮಂಗಳೂರಿಗೆ ಆಗಮಿಸಲಿದ್ದಾರೆ. ಕೊಂಕಣಿ ಭಾಷೆಯ ವಿವಿಧ ಸಮುದಾಯಗಳಾದ ಕ್ರೈಸ್ತ, ಜಿಎಸ್‌ಬಿ, ದಾಲ್ದಿ, ಕುಡ್ಮಿ, ಸಿದ್ಧಿ ಹೀಗೆ ಹಲವು ಪಂಗಡಗಳ ಗಾಯಕರು ಸುಮಾರು 5,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಲಿದ್ದಾರೆ. ಈ ಸಮಾವೇಶವು ಕೊಂಕಣಿ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ ಎರಿಕ್ ಒಝೇರಿಯೊ ಅವರಿಗೆ ಗೌರವಪೂರ್ವಕ ಅರ್ಪಣೆಯಾಗಲಿದೆ ಎಂದು ಲುವಿ ಜೆ. ಪಿಂಟೊ ತಿಳಿಸಿದರು.
ಶುಕ್ರವಾರ ನಡೆಯಲಿರುವ ಲಾಂಛನ ಬಿಡುಗಡೆ ಸಮಾರಂಭದಲ್ಲಿ ವಿಧಾನ ಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಸಚಿವ ದಿನೇಶ್ ಗುಂಡೂರಾವ್ ಶಾಸಕ ಶ್ರೀ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹಾಗೂ ಗೋವಾದ ಕಲಾವಿದ ಮೈಕಲ್ ಗ್ರೇಶಿಯಸ್ ಅತಿಥಿಗಳಾಗಿರಲಿದ್ದಾರೆ.
ಗಾಯನದ ಜೊತೆಗೆ ಸಂಗೀತ ಸಂವಾದಗಳು, ಹಿರಿಯ ಸಾಧಕರಿಗೆ ಸನ್ಮಾನ ಹಾಗೂ ಕೊಂಕಣಿ ಸಂಸ್ಕೃತಿಯ ವಸ್ತುಪ್ರದರ್ಶನಗಳು ಈ 12 ದಿನಗಳ ಕಾಲ ನಡೆಯಲಿವೆ. ಈ ಇಡೀ ಸಮಾವೇಶವನ್ನು ಕೊಂಕಣಿ ಸಂಗೀತದ ದಿಗ್ಗಜ ಎರಿಕ್ ಒಝೇರಿಯೊ ಅವರಿಗೆ ಅರ್ಪಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಲುವಿ ಜೆ. ಪಿಂಟೊ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಲಾಂಗಣ್ ಪಿರ್ಜೆಂತ್ ರೊಯ್ ಕ್ಯಾಸ್ತೆಲಿನೊ, ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ, ಸಂಘಟಕ ಸ್ಟ್ಯಾನಿ ಆಲ್ವಾರಿಸ್, ಮಾಂಡ್ ಸೊಭಾಣ್ ಉಪಾಧ್ಯಕ್ಷ ನವೀನ್ ಲೋಬೊ ಹಾಗೂ ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಉಪಸ್ಥಿತರಿದ್ದರು.