ಧಾರವಾಡ: ವ್ಯಾಯಾಮ ಕಲಿಸುವ ನೆಪದಲ್ಲಿ ಯುವತಿಯರು ಮತ್ತು ಮಹಿಳೆಯರಿಗೆ ಅಸಭ್ಯವಾಗಿ ಸ್ಪರ್ಶಿಸುತ್ತಿದ್ದ (Bad Touch) ಜಿಮ್ ಟ್ರೇನರ್‌ನನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ. ನಗರದ ಮರಾಠಾ ಕಾಲೋನಿಯಲ್ಲಿರುವ ʻಫಿಟ್‌ನೆಸ್ ಫಸ್ಟ್’ (Fitness First) ಜಿಮ್‌ನಲ್ಲಿ ಈ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಸಾಬೀರ್ ಎಂದು ಗುರುತಿಸಲಾಗಿದೆ.
ಈತ ಫಿಟ್‌ನೆಸ್ ಫಸ್ಟ್ ಜಿಮ್‌ನಲ್ಲಿ ಟ್ರೇನರ್ ಆಗಿ ಕೆಲಸ ಮಾಡುತ್ತಿದ್ದ. ಜಿಮ್‌ಗೆ ತರಬೇತಿಗಾಗಿ ಬರುತ್ತಿದ್ದ ಯುವತಿಯರು ಮತ್ತು ಮಹಿಳೆಯರಿಗೆ ವ್ಯಾಯಾಮ ಕಲಿಸುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಸಂತ್ರಸ್ತೆಯೊಬ್ಬರು ಧೈರ್ಯ ಮಾಡಿ ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಜಿಮ್ ಟ್ರೇನರ್‌ನ ಈ ಕೃತ್ಯದ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಬಜರಂಗದಳದ ಕಾರ್ಯಕರ್ತರು ಜಿಮ್‌ಗೆ ಮುತ್ತಿಗೆ ಹಾಕಿದರು. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಕೂಡಲೇ ಜಿಮ್‌ಗೆ ಬೀಗ ಹಾಕಿ, ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಸಂತ್ರಸ್ತೆಯ ದೂರಿನ ಅನ್ವಯ ಆರೋಪಿ ಸಾಬೀರ್‌ನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮಹಿಳೆಯರ ಘನತೆಗೆ ಧಕ್ಕೆ ತರುವ ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.