ಶಬರಿಮಲೆಗೆ ಮುಟ್ಟಾಗುವ ವಯಸ್ಸಿನ ಮಹಿಳೆಯರ ಪ್ರವೇಶ: ಸುಪ್ರೀಂ ಕೋರ್ಟ್‌ನಲ್ಲಿ ನಿರ್ಣಾಯಕ ವಿಚಾರಣೆ ಆರಂಭ

ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10 ರಿಂದ 50 ವರ್ಷ ವಯಸ್ಸಿನ, ಅಂದರೆ ಮುಟ್ಟಾಗುವ ವಯೋಮಾನದ ಹೆಣ್ಣುಮಕ್ಕಳು ಪ್ರವೇಶಿಸಬಹುದೇ ಎಂಬ ದಶಕಗಳ ವಿವಾದದ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರದಿಂದ ಮಹತ್ವದ ಮರುಪರಿಶೀಲನಾ ವಿಚಾರಣೆಯನ್ನು ಆರಂಭಿಸಿದೆ. ಒಂಬತ್ತು ನ್ಯಾಯಮೂರ್ತಿಗಳ ಬೃಹತ್ ಸಾಂವಿಧಾನಿಕ ಪೀಠವು ಈ ಸೂಕ್ಷ್ಮ ಪ್ರಕರಣವನ್ನು ಕೈಗೆತ್ತಿಕೊಂಡಿದೆ.

2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ, “ಋತುಸ್ರಾವದ ಕಾರಣ ನೀಡಿ ಮಹಿಳೆಯರನ್ನು ದೇವಸ್ಥಾನದಿಂದ ಹೊರಗಿಡುವುದು ಸಂವಿಧಾನ ವಿರೋಧಿ” ಎಂದು ಹೇಳಿ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಿತ್ತು. ಆದರೆ, ಈ ತೀರ್ಪು ಅಯ್ಯಪ್ಪ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಧಾರ್ಮಿಕ ಸಂಪ್ರದಾಯದ ಪ್ರಕಾರ ಅಯ್ಯಪ್ಪ ಸ್ವಾಮಿ ʻನೈಷ್ಠಿಕ ಬ್ರಹ್ಮಚಾರಿ’ಯಾಗಿದ್ದು, ನಿರ್ದಿಷ್ಟ ವಯಸ್ಸಿನ ಮಹಿಳೆಯರ ಪ್ರವೇಶವು ಸಂಪ್ರದಾಯಕ್ಕೆ ಧಕ್ಕೆ ತರುತ್ತದೆ ಎಂಬ ವಾದದೊಂದಿಗೆ ಈ ತೀರ್ಪನ್ನು ಪ್ರಶ್ನಿಸಿ ಹಲವಾರು ಮರುಪರಿಶೀಲನಾ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ ಬಾರಿಯ ವಿಚಾರಣೆಯಲ್ಲಿ ನ್ಯಾಯಾಲಯವು ಕೇವಲ ಶಬರಿಮಲೆಗೆ ಮಾತ್ರ ಸೀಮಿತವಾಗದೆ, ಧಾರ್ಮಿಕ ಆಚರಣೆ ಮತ್ತು ವೈಯಕ್ತಿಕ ಸಮಾನತೆಯ ಹಕ್ಕುಗಳ ನಡುವಿನ ಸಮತೋಲನದ ಬಗ್ಗೆ ಚರ್ಚಿಸಲಿದೆ. ಮುಟ್ಟಾಗುವ ಮಹಿಳೆಯರ ಪ್ರವೇಶಕ್ಕೆ ಇರುವ ನಿರ್ಬಂಧವು ಧರ್ಮದ ಅತ್ಯಗತ್ಯ ಭಾಗವೇ ಅಥವಾ ಅದು ತಾರತಮ್ಯವೇ ಎಂಬ ಸಾಂವಿಧಾನಿಕ ಪ್ರಶ್ನೆಗೆ ಈ ಒಂಬತ್ತು ಸದಸ್ಯರ ಪೀಠವು ಉತ್ತರ ಹುಡುಕಲಿದೆ.

ವಿಶೇಷವೆಂದರೆ, ಈ ಹಿಂದೆ ಮಹಿಳೆಯರ ಪ್ರವೇಶವನ್ನು ಬಲವಾಗಿ ಬೆಂಬಲಿಸಿದ್ದ ಕೇರಳದ ಎಡರಂಗ ಸರ್ಕಾರವು ಈಗ ತನ್ನ ನಿಲುವನ್ನು ಬದಲಿಸಿಕೊಂಡಿದೆ. ಸಿಪಿಎಂ ಪಕ್ಷವು ಶಬರಿಮಲೆ ಸಂಪ್ರದಾಯಗಳನ್ನು ಗೌರವಿಸುವ ಬಗ್ಗೆ ಇತ್ತೀಚೆಗೆ ನಿರ್ಣಯ ಕೈಗೊಂಡಿರುವುದರಿಂದ, ಕೋರ್ಟ್‌ನಲ್ಲಿ ಸರ್ಕಾರದ ವಾದವು ಈ ಬಾರಿ ಸಂಪ್ರದಾಯದ ಪರವಾಗಿ ಇರುವ ಸಾಧ್ಯತೆಯಿದೆ. ಇನ್ನೊಂದೆಡೆ ಕೇಂದ್ರ ಸರ್ಕಾರವು ಮೊದಲಿನಿಂದಲೂ ಭಕ್ತರ ನಂಬಿಕೆ ಮತ್ತು ದೇಗುಲದ ಆಚರಣೆಗಳನ್ನು ಉಳಿಸಿಕೊಳ್ಳುವ ಪರವಾಗಿಯೇ ವಾದ ಮಂಡಿಸುತ್ತಿದೆ.

ಈ ವಿಚಾರಣೆಯು ಏಪ್ರಿಲ್ 22 ರವರೆಗೆ ನಡೆಯಲಿದ್ದು, ಪ್ರವೇಶವನ್ನು ಬೆಂಬಲಿಸುವ ಮತ್ತು ವಿರೋಧಿಸುವ ಎರಡೂ ಕಡೆಯವರಿಗೆ ವಾದ ಮಂಡಿಸಲು ಪ್ರತ್ಯೇಕ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಸೇರಿದಂತೆ ಹಲವು ಗಣ್ಯ ನ್ಯಾಯಾಧೀಶರನ್ನೊಳಗೊಂಡ ಈ ಪೀಠವು ನೀಡುವ ಅಂತಿಮ ತೀರ್ಪು, ಭಾರತದ ಧಾರ್ಮಿಕ ಸ್ವಾತಂತ್ರ್ಯದ ಇತಿಹಾಸದಲ್ಲಿ ಒಂದು ಹೊಸ ದಿಕ್ಕನ್ನು ತೋರಿಸಲಿದೆ.

error: Content is protected !!