ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಐತಿಹಾಸಿಕ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಈಗ ಸಂಭ್ರಮದ ಘಟ್ಟಕ್ಕೆ ತಲುಪಿದೆ. ಈ ಜಾತ್ರೆಯ ಅತ್ಯಂತ ರೋಚಕ ಮತ್ತು ವಿಶಿಷ್ಟ ಆಚರಣೆಯಾದ ʻಪುರಾಲ್ದ ಚೆಂಡ್ʼ ಏಪ್ರಿಲ್ 6ರಿಂದ ಐದು ದಿನಗಳ ಕಾಲ ಜರುಗಲಿದೆ. ಈ ಚೆಂಡು ಕೇವಲ ಕ್ರೀಡೆಯಲ್ಲ, ಇದು 16ನೇ ಶತಮಾನದ ವೀರರಾಣಿ ಅಬ್ಬಕ್ಕನ ಆಡಳಿತ, ಪೊಳಲಿಯ ಪೌರಾಣಿಕ ಹಿನ್ನೆಲೆ, ಹಲವು ರಾಜಮನೆತನಗಳ ಇತಿಹಾಸ, ತುಳುನಾಡಿನ ಸಾಂಸ್ಕೃತಿಕ ಬಾಂಧವ್ಯ ಮತ್ತು ವಿಶಿಷ್ಟ ಸಮುದಾಯಗಳ ಸೇವೆಯ ಪ್ರತೀಕವಾಗಿದೆ.






ಅಬ್ಬಕ್ಕನ ಅರಮನೆಯಿಂದ ಪೊಳಲಿವರೆಗೆ: ಸಾಂಸ್ಕೃತಿಕ ಪಯಣ
ಪೊಳಲಿ ಚೆಂಡು ಹಬ್ಬದ ಇತಿಹಾಸವು ಪುತ್ತಿಗೆಯ ಚೌಟ ಅರಸರು ಮತ್ತು ಉಳ್ಳಾಲದ ರಾಣಿ ಅಬ್ಬಕ್ಕನ ಕಾಲಕ್ಕೆ ಬೆಸೆದುಕೊಂಡಿದೆ. ಪುತ್ತಿಗೆಯ ಸೋಮನಾಥ ದೇವಾಲಯದಿಂದ ಹೊರಡುವ ಈ ಚರ್ಮದ ಚೆಂಡನ್ನು ಅಂದಿನ ಕಾಲದ ಸಂಪ್ರದಾಯದಂತೆ ಮೊದಲು ಮಣೇಲ್ (ಈಗಿನ ಮಳಲಿ) ಪ್ರದೇಶಕ್ಕೆ ತರಲಾಗುತ್ತಿತ್ತು. ಉಳ್ಳಾಲದ ರಾಣಿ ಅಬ್ಬಕ್ಕನ ಕಾರ್ಯಕ್ಷೇತ್ರ ಮಣೇಲ್ ಆಗಿದ್ದರಿಂದ, ಅರಮನೆಯ ಅಂಗಳದಲ್ಲಿ ರಾಣಿಯ ಸಮ್ಮುಖದಲ್ಲಿ ಚೆಂಡನ್ನು ಪ್ರದರ್ಶಿಸಿ ಗೌರವ ಸಲ್ಲಿಸುವ ಪದ್ಧತಿ ಇತ್ತು. ರಾಜಮರ್ಯಾದೆ ಸ್ವೀಕರಿಸಿದ ನಂತರವಷ್ಟೇ ಚೆಂಡು ಪೊಳಲಿಗೆ ಸಾಗುತ್ತಿತ್ತು. ಇಂದಿಗೂ ಈ ಪರಂಪರೆಯನ್ನು ಅಬ್ಬಕ್ಕನ ವಂಶಜರಾದ ಮಳಲಿ ಕಟ್ಟೆಮಾರ್ ಮನೆತನದವರು ಸಾಂಕೇತಿಕವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.

ವೀರರಾಣಿ ಅಬ್ಬಕ್ಕನ ಅಚ್ಚಳಿಯದ ನೆನಪು
ಫಲ್ಗುಣಿ ನದಿಯ ದೋಣಿ ಪಯಣದ ಮೂಲಕ ಮಣೇಲ್‌ನಿಂದ ರಾಜ್ಯಭಾರ ನಡೆಸುತ್ತಿದ್ದ ಅಬ್ಬಕ್ಕ ದೇವಿ, ಪೋರ್ಚುಗೀಸರ ವಿರುದ್ಧ 40 ವರ್ಷಗಳ ಕಾಲ ಹೋರಾಡಿದ ಭಾರತದ ಮೊತ್ತಮೊದಲ ರಾಣಿ. ಆಕೆಯ ಆಡಳಿತದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳಿಗೆ ಸಿಗುತ್ತಿದ್ದ ಮನ್ನಣೆ ಇಂದಿಗೂ ಪೊಳಲಿ ಚೆಂಡಿನ ರೂಪದಲ್ಲಿ ಜೀವಂತವಾಗಿದೆ. ಅಬ್ಬಕ್ಕ ಜೈನಧರ್ಮದ ಕಟ್ಟಾ ಅನುಯಾಯಿಯಾಗಿದ್ದರೂ, ಈ ಮಣ್ಣಿನ ಸಂಸ್ಕೃತಿ ಮತ್ತು ಸಾರ್ವಭೌಮತೆಯ ಉಳಿವಿಗಾಗಿ ಸರ್ವ ಧರ್ಮಗಳನ್ನು ಒಗ್ಗೂಡಿಸಿ ಹೋರಾಡಿದ ಚಾಣಾಕ್ಷೆ. ಆಕೆಯ ತವರು ಮನೆ ಮಣೇಲ್‌ನಲ್ಲಿ ಇಂದಿಗೂ ಸಲ್ಲುವ ಈ ರಾಜಮರ್ಯಾದೆ ಇತಿಹಾಸದ ಪುಟಗಳನ್ನು ಕಣ್ಣಮುಂದೆ ತರುತ್ತದೆ.

ಅಬ್ಬಕ್ಕನ ಅರಮನೆಯ ಅಂಗಳದಲ್ಲಿ ರಾಜಮರ್ಯಾದೆ: ಪರಂಪರೆ ಉಳಿಸಿದ ಕಟ್ಟೆಮಾರ್ ಮನೆತನ
ಪೊಳಲಿ ಚೆಂಡು ಹಬ್ಬದ ಇತಿಹಾಸದಲ್ಲಿ ಮಳಲಿಯ (ಮಣೇಲ್) ಕಟ್ಟೆಮಾರ್ ಮನೆತನಕ್ಕೆ ವಿಶೇಷ ಸ್ಥಾನವಿದೆ. ಉಳ್ಳಾಲದ ವೀರರಾಣಿ ಅಬ್ಬಕ್ಕನ ತವರು ಮನೆ ಮಣೇಲ್ ಆಗಿದ್ದು, ಅರಸೊತ್ತಿಗೆಯ ಕಾಲದಲ್ಲಿ ಪೊಳಲಿ ಚೆಂಡಿಗೆ ರಾಜಮರ್ಯಾದೆ ನೀಡುವ ಸಂಪ್ರದಾಯ ಇತ್ತು. ಈ ಪವಿತ್ರ ಪರಂಪರೆಯನ್ನು ಅಬ್ಬಕ್ಕನ ವಂಶಜರಾದ ಕಟ್ಟೆಮಾರ್ ಮನೆತನದವರು ಇಂದಿಗೂ ಅತ್ಯಂತ ಭಕ್ತಿ-ಗೌರವಗಳಿಂದ ಸಾಂಕೇತಿಕವಾಗಿ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಈ ಬಾರಿಯೂ ಸಂಪ್ರದಾಯದಂತೆ ಕಟ್ಟೆಮಾರ್ ಪ್ರಶಾಂತ್ ಕುಮಾರ್ ಜೈನ್ ಅವರ ಮನೆಯ ಅಂಗಳವನ್ನು ಸಾರಿಸಿ, ಸುಂದರ ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ಗಾಣಿಗ ಸಮುದಾಯದವರು ಚೆಂಡನ್ನು ಭಕ್ತಿಯಿಂದ ಹೊತ್ತು ತಂದರು. ಬಳಿಕ ರಾಜಮರ್ಯಾದೆಯ ಸಂಕೇತವಾಗಿ ಚೆಂಡನ್ನು ಮನೆಯಂಗಳದಲ್ಲಿ ಪ್ರದರ್ಶಿಸಲಾಯಿತು. ಮೆರವಣಿಗೆಯಲ್ಲಿ ಬಂದವರಿಗೆ ಬೆಲ್ಲ, ನೀರು ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಚೆಂಡನ್ನು ಹೊತ್ತು ತಂದ ಗಾಣಿಗ ಸಮುದಾಯದವರಿಗೆ ಗೌರವಪೂರ್ವಕವಾಗಿ ಉಡುಗೊರೆಗಳನ್ನು ನೀಡಿ ಸನ್ಮಾನಿಸಲಾಯಿತು. ಈ ಮೂಲಕ ಶತಮಾನಗಳ ಹಿಂದಿನ ರಾಜವೈಭವದ ಕ್ಷಣಗಳು ಕಟ್ಟೆಮಾರ್ ಮನೆಯ ಅಂಗಳದಲ್ಲಿ ಮರುಕಳಿಸಿದವು.
ಅಲ್ಲಿಂದ ಹೊರಡ ಚೆಂಡನ್ನು ಪೊಳಲಿ ಕೊಡಮಣಿತ್ತಾಯ ದೈವದ ಭಂಡಾರ ಹೋಗುವ ಉಳಿಪಾಡಿಗುತ್ತಿನಲ್ಲಿ ದೈವಗಳ ಮುಂದಿರಿಸಿ ಪ್ರಾರ್ಥಿಸಲಾಯಿತು. ಹಿಂದಿನ ಸಂಪ್ರದಾಯದಂತೆ ಕಟ್ಟೆಮಾರಿನಲ್ಲಿ ಸನ್ಮಾನ ಸ್ವೀಕರಿಸಿ ಮಣೇಲ್-ಪೊಳಲಿ ಸೇತುವೆ ಮುಖಾಂತರ ಸಾಗಿ ಕಡಪುಕರಿಯದ ಗಾಣಿಗ ಮನೆಯಲ್ಲಿ ಚೆಂಡನ್ನು ಇಟ್ಟು, ದೈವಗಳ ಮುಂದೆ ಪ್ರಾರ್ಥಿಸಲಾಯಿತು. ಅಲ್ಲಿಂದ ಚೆಂಡನ್ನು ಗಾಣಿಗ ಸಮುದಾಯದವರು ಪೊಳಲಿ ದೇವಸ್ಥಾನಕ್ಕೆ ಒಪ್ಪಿಸಿದರು.

ಗಾಣಿಗ ಸಮುದಾಯದ ಅಪ್ರತಿಮ ಸೇವೆ

ಪುರಾಲ್ದ ಚೆಂಡಿನಲ್ಲಿ ಕಡಪುಕರಿಯದ ಗಾಣಿಗ ಸಮುದಾಯದ ಸೇವೆ ಅತ್ಯಂತ ಅನನ್ಯವಾದುದು. ಪುತ್ತಿಗೆಯಿಂದ ಪೊಳಲಿವರೆಗೆ ಈ ಪವಿತ್ರ ಚೆಂಡನ್ನು ಭಕ್ತಿಯಿಂದ ಹೊತ್ತು ತರುವ ಗುರುತರ ಜವಾಬ್ದಾರಿಯನ್ನು, ಚೆಂಡಿನ ಗದ್ದೆಗೆ ಚೆಂಡನ್ನು ತರುವ ಸೇವೆಯಬ್ಬಯ ಈ ಸಮುದಾಯವು ಶತಮಾನಗಳಿಂದಲೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದೆ. ಈ ಬಾರಿ ಮೂಡಬಿದ್ರೆಯ ಮಿಜಾರು ಪದ್ಮನಾಭ ಸಮಗಾರ ಅವರು ಚರ್ಮದಿಂದ ಅತ್ಯಂತ ನಾಜೂಕಾಗಿ ಸಿದ್ಧಪಡಿಸಿದ ಚೆಂಡನ್ನು, ಗಂಗಾಧರ ಗಾಣಿಗ ಮತ್ತು ಅವರ ತಂಡದವರು ಭವ್ಯ ಮೆರವಣಿಗೆಯ ಮೂಲಕ ತಂದರು.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆವರಣದಲ್ಲಿ ಚೆಂಡನ್ನು ಹಿಡಿದುಕೊಂಡು ಹೋಗುವ ವಿಶೇಷ ಕ್ರಮವು ಕೇವಲ ಈ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ. ಕೇವಲ ಕ್ರೀಡೆಯಷ್ಟೇ ಅಲ್ಲದೆ, ಧಾರ್ಮಿಕ ವಿಧಿವಿಧಾನಗಳಲ್ಲೂ ಇವರ ಪಾತ್ರ ದೊಡ್ಡದು. ಜಾತ್ರೆಯ ಸಂದರ್ಭದಲ್ಲಿ ದೇಗುಲದ ಇಳಾಲ್, ದೀವಟಿಗೆ ಹಾಗೂ ಕಂಚಿತಿಪಲೆಗೆ ಎಣ್ಣೆ ಹಾಕುವ ಪವಿತ್ರ ಜವಾಬ್ದಾರಿಯೂ ಇದೇ ಸಮುದಾಯದ್ದಾಗಿದೆ.
ಕಡಪುಕರಿಯದ ಮನೆಯವರು ನೀಡಿರುವ ಮಾಹಿತಿಯಂತೆ, ಈ ಸೇವೆಗಳು ತಲೆಮಾರುಗಳಿಂದ ಹರಿದುಬಂದ ಬಳುವಳಿಯಾಗಿದ್ದು, ದೇವಸ್ಥಾನದ ಸಂಪ್ರದಾಯದೊಂದಿಗೆ ಗಾಣಿಗ ಸಮುದಾಯವು ಅವಿನಾಭಾವವಾಗಿ ಬೆಸೆದುಕೊಂಡಿದೆ. ಪರಂಪರೆಯ ಭಾಗವಾಗಿ ಈ ಸಮುದಾಯದ ಪ್ರತಿಯೊಬ್ಬ ಸದಸ್ಯರೂ ಈ ಸೇವೆಯನ್ನು ದೇವಿಯ ಪ್ರಸಾದವೆಂದೇ ಭಾವಿಸಿ ನಡೆಸಿಕೊಡುತ್ತಿರುವುದು ಪೊಳಲಿ ಜಾತ್ರೆಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ಆಶೀರ್ವಾದದೊಂದಿಗೆ ನಡೆಯುವ ಪುರಾಲ್ದ ಚೆಂಡ್ ಕರಾವಳಿಯ ಜಾನಪದ ವೈವಿಧ್ಯ ಮತ್ತು ಐತಿಹಾಸಿಕ ಪರಂಪರೆಯನ್ನು ವಿಶ್ವಕ್ಕೆ ಸಾರುವ ಕನ್ನಡಿಯಾಗಿದೆ. ಅಬ್ಬಕ್ಕನ ಶೌರ್ಯ ಮತ್ತು ಪೊಳಲಿ ಕ್ಷೇತ್ರದ ಪಾವಿತ್ರ್ಯತೆ ಒಂದೇ ವೇದಿಕೆಯಲ್ಲಿ ಮೇಳೈಸುವ ಈ ಕ್ಷಣ ಸಾವಿರ ಸೀಮೆಯ ಭಕ್ತರಿಗೆ ಹೆಮ್ಮೆಯ ಸಂಗತಿ.
