
ಕುಂದಾಪುರ: ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತರಾಗಿದ್ದ ಅಮಾಸೆಬೈಲು ಠಾಣೆಯ ಪೊಲೀಸ್ ಸಿಬ್ಬಂದಿ ಹುಲಿಕಲ್ ಘಾಟಿ ಕಡೆಯಿಂದ ಬರುತ್ತಿದ್ದ ಗೂಡ್ಸ್ ವಾಹನವನ್ನು ತಪಾಸಣೆಗಾಗಿ ತಡೆದಾಗ ಅಕ್ರಮವಾಗಿ ಎರಡು ಎತ್ತುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿರುವುದನ್ನು ಹೊಸಂಗಡಿ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಅಮಾಸೆಬೈಲು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪೊಲೀಸರು ಜಾನುವಾರು ಸಾಗಿಸುತ್ತಿದ್ದ ವಾಹನ ಹಾಗೂ ಅದಕ್ಕೆ ಬೆಂಗಾವಲಾಗಿ ಬಂದಿದ್ದ ಕಾರನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ, ಈ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಮುಷ್ತಾಕ್ ಹುಸೇನ್ ಸಾಬ್ ನದಾಫ್ ಬೆಳಗಾಂ (29), ಸಲೀಂ ಹುಸೇನ್ ಸಾಬ್ ನದಾಫ್ ಬೆಳಗಾಂ (33), ಕಂಡ್ಲೂರು ಜುಮ್ಮಾ ಮಸೀದಿ ರಸ್ತೆಯ ನದೀಮ್ ಅಬ್ದುಲ್ ಖಾದರ್ (34) ಬಂಧಿತ ಆರೋಪಿಗಳು. ಇದೇ ವೇಳೆ ಬೆಂಗಾವಲು ವಾಹನದಲ್ಲಿದ್ದ ಮೊಹಮ್ಮದ್ ನೌಫಿಲ್ ಮತ್ತು ಮತ್ತೋರ್ವ ವ್ಯಕ್ತಿ ಪರಾರಿಯಾಗಿದ್ದಾರೆ.

ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.