ಸ್ನೇಹಿತನ ಮದುವೆ ಬಂದಿದ್ದ ಯುವಕ ನದಿಗೆ ಈಜಲು ಹೋಗಿ ನೀರಿನ ಸೆಳೆತಕ್ಕೆ ಸಿಲುಕಿ ಸಾ*ವು!!

ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನರಸಿಂಹರಾಜಪುರ(N R Pura) ತಾಲ್ಲೂಕಿನ ಬನ್ನೂರು ಗ್ರಾಮದ ಬಳಿ ಇಂದು(ಎ.6) ಬೆಳಿಗ್ಗೆ ನಡೆದಿದೆ.

ಗದಗ ಮೂಲದ ಅಭಿಷೇಕ್ (27) ಮೃತ ಯುವಕ.

ಅಭಿಷೇಕ್ ಅವರು ತಮ್ಮ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಸ್ನೇಹಿತರ ಜತೆ ಸೇರಿ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದರು. ಸ್ನೇಹಿತರೊಂದಿಗೆ ಸ್ಥಳೀಯ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಇವರು, ಇಂದು ಬೆಳಿಗ್ಗೆ ಭದ್ರಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅಭಿಷೇಕ್ ನಾಪತ್ತೆಯಾಗಿದ್ದರು.

ಯುವಕ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯ ನಂತರ, ಬನ್ನೂರು ಗ್ರಾಮದ ಸಮೀಪದ ನದಿಯಲ್ಲೇ ಅಭಿಷೇಕ್ ಅವರ ಮೃತದೇಹ ಪತ್ತೆಯಾಗಿದೆ.

ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

error: Content is protected !!