ಹಾರ್ಮುಜ್ ನಂತರ ಈಗ ಬಾಬ್-ಎಲ್-ಮಾಂಡೆಬ್ ಮೇಲೆ ಇರಾನ್ ಕಣ್ಣು-‌ ಜಗತ್ತಿನಾದ್ಯಂತ ಇಂಧನ, ಆಹಾರ ಪದಾರ್ಥಗಳ ಬೆಲೆ ಏರಿಕೆ ಭೀತಿ

ನವದೆಹಲಿ/ತೈಹ್ರಾನ್: ಇತ್ತೀಚೆಗೆ ಇಸ್ರೇಲ್ ಮತ್ತು ಅಮೆರಿಕದ ದಾಳಿಗಳ ಬೆನ್ನಲ್ಲೇ ಮಾರ್ಚ್ 2 ರಿಂದ ಇರಾನ್ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಬಂದ್ ಮಾಡಿದ್ದು, ಜಗತ್ತಿನಾದ್ಯಂತ ಇಂಧನ ಬೆಲೆಗಳು ಗಗನಕ್ಕೇರಿವೆ. ಈ ಆತಂಕದ ಬೆನ್ನಲ್ಲೇ ಇರಾನ್ ಈಗ ಮತ್ತೊಂದು ಪ್ರಮುಖ ಸಮುದ್ರ ಮಾರ್ಗವಾದ ಬಾಬ್-ಎಲ್-ಮಾಂಡೆಬ್ (Bab-el-Mandeb) ಜಲಸಂಧಿಯ ಮೇಲೆ ತನ್ನ ನಿಯಂತ್ರಣ ಸಾಧಿಸುವ ಸುಳಿವು ನೀಡಿದ್ದು, ಜಾಗತಿಕ ವ್ಯಾಪಾರ ವಲಯದಲ್ಲಿ ಭೀತಿ ಸೃಷ್ಟಿಸಿದೆ.

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗರ್ ಗಾಲಿಬಾಫ್ ಅವರು ಸಾಮಾಜಿಕ ಜಾಲತಾಣ ʻX’ ನಲ್ಲಿ ಹಂಚಿಕೊಂಡಿರುವ ಸಾಲುಗಳು ಜಗತ್ತಿನ ಗಮನ ಸೆಳೆದಿವೆ. “ವಿಶ್ವದ ತೈಲ, ಎಲ್‌ಎನ್‌ಜಿ (LNG), ಗೋಧಿ, ಅಕ್ಕಿ ಮತ್ತು ರಸಗೊಬ್ಬರ ಸಾಗಣೆಯ ಎಷ್ಟು ಪಾಲು ಬಾಬ್-ಎಲ್-ಮಾಂಡೆಬ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ? ಯಾವ ದೇಶಗಳು ಮತ್ತು ಕಂಪೆನಿಗಳು ಈ ಮಾರ್ಗವನ್ನು ಅತಿ ಹೆಚ್ಚು ಅವಲಂಬಿಸಿವೆ?” ಎಂದು ಪ್ರಶ್ನಿಸುವ ಮೂಲಕ, ಇರಾನ್ ತನ್ನ ಎದುರಾಳಿಗಳ ಮೇಲೆ ಒತ್ತಡ ಹೇರಲು ಈ ಮಾರ್ಗವನ್ನು ಗುರಿಯಾಗಿಸಬಹುದು ಎಂಬ ಮುನ್ಸೂಚನೆ ನೀಡಿದ್ದಾರೆ.

ಬಾಬ್-ಎಲ್-ಮಾಂಡೆಬ್ ಜಲಸಂಧಿಯು ಕೆಂಪು ಸಮುದ್ರವನ್ನು (Red Sea) ಏಡನ್ ಕೊಲ್ಲಿಯೊಂದಿಗೆ (Gulf of Aden) ಸಂಪರ್ಕಿಸುವ ಅತ್ಯಂತ ಕಿರಿದಾದ ಮತ್ತು ಆಯಕಟ್ಟಿನ ಮಾರ್ಗವಾಗಿದೆ. ತೈಲ ಮತ್ತು ನೈಸರ್ಗಿಕ ಅನಿಲದ ಸಾಗಣೆಗೆ ಈ ಮಾರ್ಗ ಅತಿ ಮುಖ್ಯ. ಗೋಧಿ ಮತ್ತು ಅಕ್ಕಿಯಂತಹ ಅಗತ್ಯ ಆಹಾರ ಪದಾರ್ಥಗಳ ಜಾಗತಿಕ ರಫ್ತು ಈ ಮಾರ್ಗದ ಮೇಲೆ ಅವಲಂಬಿತವಾಗಿದೆ. ಯಾವುದೇ ಅಡೆತಡೆ ಉಂಟಾದಲ್ಲಿ ಇದು ಕೇವಲ ಇಂಧನ ಮಾರುಕಟ್ಟೆ ಮಾತ್ರವಲ್ಲದೆ, ಜಾಗತಿಕ ಆಹಾರ ಭದ್ರತೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಈ ಸಮುದ್ರ ಎಚ್ಚರಿಕೆಯ ನಡುವೆಯೇ ಇರಾನ್ ಮತ್ತು ಅದರ ಮಿತ್ರಪಡೆಗಳು “ಆಪರೇಷನ್ ಟ್ರೂ ಪ್ರಾಮಿಸ್ 4” ಭಾಗವಾಗಿ “ವೇವ್ 93” ಕಾರ್ಯಾಚರಣೆಯನ್ನು ನಡೆಸಿವೆ. ಇದರ ಅಡಿಯಲ್ಲಿ ಇಸ್ರೇಲ್‌ನ ಹೈಫಾ, ಪಶ್ಚಿಮ ಗೆಲಿಲಿ ಸೇರಿದಂತೆ ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಮಾರ್ಚ್ 28 ರಂದು ಹೌತಿ ಬಂಡುಕೋರರು ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ ನಂತರ, ಈ ಜಲಸಂಧಿಯು ಅಮೆರಿಕ ಮತ್ತು ಇರಾನ್ ನಡುವಿನ ಹೊಸ ಸಂಘರ್ಷದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.

ಯೆಮನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಈಗಾಗಲೇ ಕೆಂಪು ಸಮುದ್ರದಲ್ಲಿ ಸಾಗುವ ವಾಣಿಜ್ಯ ಹಡಗುಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದಾರೆ. ಇಸ್ರೇಲ್ ನಂಟು ಹೊಂದಿರುವ ಹಡಗುಗಳೇ ನಮ್ಮ ಗುರಿ ಎಂದು ಅವರು ಘೋಷಿಸಿದ್ದಾರೆ.

ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದ ಈಗಾಗಲೇ ಜಾಗತಿಕ ವ್ಯಾಪಾರ ಕುಸಿದಿದ್ದು, ಈಗ ಬಾಬ್-ಎಲ್-ಮಾಂಡೆಬ್ ಕೂಡ ಬಂದ್ ಆದಲ್ಲಿ ಜಗತ್ತು ಹಿಂದೆಂದೂ ಕಾಣದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎಂಬ ಆತಂಕ ತಜ್ಞರಲ್ಲಿ ಮನೆಮಾಡಿದೆ.

error: Content is protected !!