ಕಾರಿನಲ್ಲಿ ಗೋ ಸಾಗಾಟ; ಸಾರ್ವಜನಿಕರಿಂದ ತಡೆ, ಆರೋಪಿಗಳು ಪರಾರಿ

ಭಟ್ಕಳ: ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಗೋವುಗಳ ಕಾಲುಗಳನ್ನು ಕಟ್ಟಿ, ಹಗ್ಗವನ್ನು ಕುತ್ತಿಗೆಗೆ ಬಿಗಿದು ಇನ್ನೇನು ಕಳ್ಳರು ಹೊರಡಬೇಕೆನ್ನುವಷ್ಟರಲ್ಲಿ ಗೋವುಗಳು ಕೂಗಿಗೆ ಗ್ರಾಮಸ್ಥರು ಎಚ್ಚೆತ್ತು ತಡೆಯೊಡ್ದಿದ ಘಟನೆ ಜಾಲಿ ಗ್ರಾಮದ ತಲಗೇರಿಯ ವಿವೇಕಾನಂದ ನಗರದಲ್ಲಿ ಇಂದು(ಎ.4) ಬೆಳಗಿನ ಜಾವ ಸುಮಾರು 3.45 ಗಂಟೆಗೆ ನಡೆದಿದೆ.

ಗ್ರಾಮಸ್ಥರು ಏನಾಗಿದೆ ಎಂದು ಬಂದು ನೋಡುವಷ್ಟರಲ್ಲಿ ಗೋ ಕಳ್ಳರು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಅಷ್ಟರಲ್ಲಿ ಒಟ್ಟಾದ ಗ್ರಾಮಸ್ಥರು ಗೋವು ಕಳ್ಳರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿರುವಾಗ ಪಕ್ಕದ ಅರಣ್ಯ ಪ್ರದೇಶದಲ್ಲಿ ಅವಿತು ಇನ್ನೊಂದು ಗ್ಯಾಂಗ್‌ನ್ನು ಕರೆಸಿಕೊಂಡು ಪರಾರಿಯಾಗುವ ಹಂತದಲ್ಲಿರುವಾಗ ಗ್ರಾಮಸ್ಥರು ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬರುವಷ್ಟರಲ್ಲಿ ಗೋ ಕಳ್ಳರ ತಂಡ ಕಾರು ಹಾಗೂ ತಾವು ತಂದಿದ್ದ ಬೈಕ್ ಬಿಟ್ಟು ಪರಾರಿಯಾಗಿದೆ ಎನ್ನಲಾಗಿದೆ.

ಪೊಲೀಸರು ಕಾರನ್ನು ಪರಿಶೀಲಿಸಿದಾಗ ಕಾರಿನ ಒಳಗೊಂದು ನಂಬರ್ ಪ್ಲೇಟ್ ಪತ್ತೆಯಾಗಿದ್ದು, ಇದು ನಿರಂತರವಾಗಿ ಗೋವು ಕಳವು ಮಾಡುವ ಗ್ಯಾಂಗ್‌ನ ಕೃತ್ಯ ಎನ್ನುವುದು ಸಾಬೀತಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕದ್ದೊಯ್ದು ಹತ್ಯೆ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು, ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಿ ಇಂತಹ ಕೃತ್ಯವನ್ನು ತಡೆಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

error: Content is protected !!