ಕುವೈತ್: ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಹೆಚ್ಚಾಗಿದ್ದು, ಶುಕ್ರವಾರ(ಎ.3) ಮುಂಜಾನೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಕುವೈತ್‌ನ ಪ್ರಮುಖ ವಿದ್ಯುತ್ ಮತ್ತು ನೀರು ಶುದ್ಧೀಕರಣ ಸ್ಥಾವರ ಅಕ್ಷರಶಃ ನಲುಗಿ ಹೋಗಿದೆ. ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಇತ್ತ ದುಬೈನಲ್ಲಿ ಕ್ರೈಸ್ತರ ಪವಿತ್ರ ಈಸ್ಟರ್ ಹಬ್ಬದ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲು ಆದೇಶ ಹೊರಡಿಸಲಾಗಿದೆ.

ಕುವೈತ್‌ನ ವಿದ್ಯುತ್ ಮತ್ತು ಜಲ ಸಚಿವಾಲಯದ ವಕ್ತಾರರು ಈ ಬಗ್ಗೆ ಮಾಹಿತಿ ನೀಡಿದ್ದು, “ಇರಾನ್‌ನ ದೌರ್ಜನ್ಯಕ್ಕೆ ನಮ್ಮ ವಿದ್ಯುತ್ ಉತ್ಪಾದನಾ ಕೇಂದ್ರ ಬಲಿಯಾಗಿದೆ. ದಾಳಿಯಿಂದ ಕಟ್ಟಡಕ್ಕೆ ಭಾರಿ ಹಾನಿಯಾಗಿದ್ದರೂ, ಸದ್ಯಕ್ಕೆ ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ಯಾವುದೇ ವ್ಯತ್ಯಯವಾಗಿಲ್ಲ” ಎಂದು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಯುದ್ಧ ವಿಮಾನಗಳ ಆರ್ಭಟ ಜೋರಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಗಲ್ಫ್ ದೇಶಗಳ ಮೇಲೆ ಇರಾನ್ ಪದೇ ಪದೇ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಯುಎಇ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ದುಬೈನ ಜೆಬೆಲ್ ಅಲಿಯಲ್ಲಿರುವ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ ಚರ್ಚ್ ಮತ್ತು ಸೇಂಟ್ ಮೇರಿಸ್ ಚರ್ಚ್‌ಗಳಲ್ಲಿ ಈಸ್ಟರ್ ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲಾಗಿದೆ.

“ಸಾರ್ವಜನಿಕರ ಸುರಕ್ಷತೆಯೇ ನಮಗೆ ಮುಖ್ಯ. ಯಾರೂ ಚರ್ಚ್ ಆವರಣಕ್ಕೆ ಬರಬೇಡಿ” ಎಂದು ಚರ್ಚ್ ಆಡಳಿತ ಮಂಡಳಿ ಮನವಿ ಮಾಡಿದೆ. ಭಕ್ತರಿಗಾಗಿ ಗುಡ್ ಫ್ರೈಡೇ ಮತ್ತು ಈಸ್ಟರ್ ಪ್ರಾರ್ಥನೆಯನ್ನು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಫೆಬ್ರವರಿ 28ರಂದು ಆರಂಭವಾದ ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಸಂಘರ್ಷ ಈಗ ಜಾಗತಿಕ ಆರ್ಥಿಕತೆಯ ಮೇಲೆ ಬರೆ ಎಳೆಯುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಇರಾನ್ ಧ್ವಂಸ ಕಾರ್ಯ ಇನ್ನು ಬಾಕಿ ಇದೆ” ಎಂದು ಗುಡುಗಿರುವುದು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುವ ಲಕ್ಷಣಗಳನ್ನು ತೋರುತ್ತಿದೆ. ಕೈಗಾರಿಕಾ ಪ್ರದೇಶಗಳನ್ನೇ ಟಾರ್ಗೆಟ್ ಮಾಡುತ್ತಿರುವುದು ಅನಿವಾಸಿ ಭಾರತೀಯರಲ್ಲೂ ತಲ್ಲಣ ಮೂಡಿಸಿದೆ.