ಗುರುಪುರ ಕಂಬಳ ಸಂಭ್ರಮ: ತುಳುನಾಡಿನ ಅಸ್ಮಿತೆಯ ಜೊತೆಗೆ ಮಾನವೀಯತೆಗೂ ಸಾಕ್ಷಿಯಾದ ಜಾನಪದ ಕ್ರೀಡೆ

ಗುರುಪುರ:‌ ತುಳುನಾಡಿನ ವೀರ ಕ್ರೀಡೆ ಕಂಬಳವು ಕೇವಲ ಕೆಸರುಗದ್ದೆಯ ಓಟಕ್ಕೆ ಸೀಮಿತವಾಗದೆ, ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಮಾನವೀಯ ವೇದಿಕೆಯಾಗಿಯೂ ಹೊರಹೊಮ್ಮಿದೆ. ಗುರುಪುರ ಮಾಣಿಬೆಟ್ಟು ಗುತ್ತಿನಲ್ಲಿ ಶನಿವಾರ ನಡೆದ ಮೂಳೂರು–ಅಡ್ಡೂರು ಜೋಡುಕರೆ ಗುರುಪುರ ಕಂಬಳವು ಈ ವಿಶಿಷ್ಟ ಸಮಾಜಮುಖಿ ಕಾರ್ಯಕ್ಕೆ ಸಾಕ್ಷಿಯಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಇನಾಯತ್ ಅಲಿ ಅವರ ನೇತೃತ್ವದಲ್ಲಿ 3ನೇ ವರ್ಷದ ಈ ಜಾನಪದ ಕ್ರೀಡಾಕೂಟಕ್ಕೆ ಧ್ವಜಾರೋಹಣದ ಮೂಕಕ ಚಾಲನೆ ಸಿಕ್ಕಿದೆ.

ಈ ಬಾರಿಯ ಕಂಬಳದ ವಿಶೇಷತೆಯೆಂದರೆ ಅದು ಮೆರೆದ ಮಾನವೀಯತೆ. ಕ್ರೀಡಾಕೂಟದ ಸಂದರ್ಭದಲ್ಲಿ ಅಶಕ್ತ ಕುಟುಂಬಗಳ ಹೆಣ್ಣು ಮಕ್ಕಳ ವಿವಾಹ, ಬಡವರಿಗೆ ಮನೆ ನಿರ್ಮಾಣ ಹಾಗೂ ವಿವಿಧ ಸಾಮಾಜಿಕ ಸೇವೆಗಳಿಗಾಗಿ ಒಟ್ಟು 25 ಲಕ್ಷ ರೂ. ಮೊತ್ತದ ಸಹಾಯಧನವನ್ನು ಹಸ್ತಾಂತರಿಸಲಾಯಿತು. ಕಂಬಳದ ಅಂಗಳದಲ್ಲಿ ಇಂತಹದೊಂದು ದೊಡ್ಡ ಮಟ್ಟದ ಧನಸಹಾಯ ಮಾಡುವ ಮೂಲಕ ಇನಾಯತ್ ಅಲಿ ಅವರು ಕ್ರೀಡೆಯ ಜೊತೆಗೆ ಶ್ರೇಷ್ಠ ಮಟ್ಟದ ಹೃದಯ ವೈಶಾಲ್ಯತೆಯನ್ನು ಪ್ರದರ್ಶಿಸಿದ್ದಾರೆ ಎಂದು ಗಣ್ಯರು ಬಣ್ಣಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ಅವರು ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿ, “ಕಂಬಳ ನಮ್ಮ ಮಣ್ಣಿನ ಸಂಸ್ಕೃತಿ. ಇನಾಯತ್ ಅಲಿ ಅವರು ಕಂಬಳವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಜೊತೆಗೆ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ,” ಎಂದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ರೈ ಮಾಲಾಡಿ ಅವರು ಮಾತನಾಡಿ, ಈ ಕಂಬಳವು ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಅತ್ಯಂತ ವಿಶಿಷ್ಟವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನಾಯತ್ ಅಲಿ ವಹಿಸಿದ್ದರು. ಮುಂಡಿತ್ತಾಯ ದೈವಸ್ಥಾನದ ತಂತ್ರಿಗಳಾದ ಜಿ.ಟಿ. ವಾಸುದೇವ ಭಟ್, ಜಿಲ್ಲಾ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಕಂಬಳ ಭೀಷ್ಮ ಗುಣಪಾಲ ಕಡಂಬ, ಮತ್ತು ಪ್ರಮುಖ ಗಣ್ಯರಾದ ವರ್ಧಮಾನ್ ಶೆಟ್ಟಿ, ಪದ್ಮರಾಜ್ ಆರ್. ಪೂಜಾರಿ ಹಾಗೂ ಮಂಜನಾಥ ಭಂಡಾರಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು. ಸಮಿತಿಯ ಸ್ಥಾಪಕಾಧ್ಯಕ್ಷರಾದ ರಾಜ್ ಕುಮಾರ್ ಶೆಟ್ಟಿ ತಿರುವೈಲುಗುತ್ತು ಅವರು ಆಗಮಿಸಿದ ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಇಡೀ ಸಮಾರಂಭದ ಅಚ್ಚುಕಟ್ಟಾದ ನಿರೂಪಣೆಯನ್ನು ವಿಜೇತ್ ಶೆಟ್ಟಿ ಮಂಜನಾಡಿ ಮತ್ತು ಮನೋಜ್ ವಾಮಂಜೂರು ಅವರು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು.

ಸಾವಿರಾರು ಪ್ರೇಕ್ಷಕರ ಹರ್ಷೋದ್ಗಾರ, ಜೋಡುಕರೆಯಲ್ಲಿ ಹೂಡಿದ ಕೋಣಗಳ ಮಿಂಚಿನ ಓಟ ಮತ್ತು ಅಶಕ್ತರ ಮುಖದಲ್ಲಿ ಮೂಡಿದ ಮಂದಹಾಸ—ಇವೆಲ್ಲವೂ ಸೇರಿ ಈ ಬಾರಿಯ ಗುರುಪುರ ಕಂಬಳವನ್ನು ಕೇವಲ ಕ್ರೀಡೆಯಾಗಿ ಉಳಿಸದೆ, ಒಂದು ಮೌಲ್ಯಯುತ ಸಾಮಾಜಿಕ ಹಬ್ಬವನ್ನಾಗಿ ಪರಿವರ್ತಿಸಿತು.

error: Content is protected !!