ಮಂಗಳೂರು: ಕರಾವಳಿಯ ಬಿಸಿಲು ಅಂದ್ರೆ ಅದು ಬರಿ ತಾಪಮಾನವಲ್ಲ, ಅದೊಂದು ಸುಡುವ ಬೆಂಕಿ! ಮೈ ಸುಡುವ ಬಿಸಿಲಿಗೆ ಶ್ರೀಮಂತರು ಎಸಿ ರೂಮಿನಲ್ಲಿ ಆಶ್ರಯ ಪಡೆದರೆ, ಬಡ ಕಾರ್ಮಿಕನಿಗೆ ಮಾತ್ರ ಸುಡುವ ರಸ್ತೆಯೇ ಅರಮನೆ, ನೆತ್ತಿಯ ಮೇಲೆ ಉರಿಯುವ ಸೂರ್ಯನೇ ವಿಧಿಬರಹ!

ಇಂದು ಮಂಗಳೂರಿನ ರಸ್ತೆಗಳಲ್ಲಿ ಸಿಗುವ ದೃಶ್ಯವೊಂದು ಎಂತವರ ಕಣ್ಣನ್ನೂ ಒದ್ದೆ ಮಾಡುತ್ತದೆ. ಧಗಧಗಿಸುವ ಬಿಸಿಲಿನಲ್ಲಿ, ಕಾದು ಕೆಂಪಾದ ಇಟ್ಟಿಗೆಗಳ ನಡುವೆ ಕುಳಿತು ಕೆಲಸ ಮಾಡುತ್ತಿರುವ ಕಾರ್ಮಿಕರ ಮುಖದಲ್ಲಿ ಕಾಣುವುದು ಬಸವಳಿದ ಆಯಾಸ ಮಾತ್ರವಲ್ಲ, ಸಂಜೆಯ ಹೊತ್ತಿನ ಹೊಟ್ಟೆಪಾಡಿನ ಚಿಂತೆ. ಕೈಯಲ್ಲಿ ಸಿಮೆಂಟ್ ಮಿಶ್ರಣದ ತಟ್ಟೆ, ಮೈಯೆಲ್ಲಾ ಧೂಳು, ಹಣೆ ಮೇಲೆ ಹರಿಯುವ ಬೆವರಿನ ಹನಿಗಳು.. ಇವುಗಳ ನಡುವೆ ಅವರು ಕಟ್ಟುತ್ತಿರುವುದು ಬರೀ ಗೋಡೆಯನ್ನಲ್ಲ, ತಮ್ಮ ಕುಟುಂಬದ ನಾಳಿನ ಬದುಕನ್ನು!

“ಬಿಸಿಲು ಜಾಸ್ತಿ ಇದೆ ಅಂತ ಮನೆಯಲ್ಲಿ ಕೂತರೆ ಸಂಜೆ ಒಲೆ ಉರಿಯಲ್ಲ ಸ್ವಾಮಿ..” ಎಂಬುದು ಇಲ್ಲಿನ ಪ್ರತಿಯೊಬ್ಬ ಕಾರ್ಮಿಕನ ಅಳಲು. ಇವರಿಗೆ ರಜೆ ಎಂಬುದು ಶಾಪ, ಕೆಲಸವಿಲ್ಲದ ದಿನ ಅಂದ್ರೆ ಅದು ಉಪವಾಸದ ದಿನ ಎಂದೇ ಅರ್ಥ. ಸೂರ್ಯ ಎಷ್ಟು ಜೋರಾಗಿ ಸುಡುತ್ತಾನೋ, ಅಷ್ಟೇ ವೇಗವಾಗಿ ಇವರ ಕೈಗಳು ಕೆಲಸ ಮಾಡಬೇಕು. ಇಲ್ಲದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲ, ಮಕ್ಕಳಿಗೆ ಅನ್ನವಿಲ್ಲ. ಇಲ್ಲಿ ಬಿಸಿಲಿನ ಝಳಕ್ಕಿಂತ ಹೊಟ್ಟೆಯ ಹಸಿವಿನ ಝಳವೇ ದೊಡ್ಡದಾಗಿದೆ.

ರಸ್ತೆಯ ಬದಿಯಲ್ಲಿ ಸಿಗುವ ಒಂದು ಸಣ್ಣ ಮರದ ನೆರಳು ಇವರಿಗೆ ಪಂಚತಾರಾ ಹೋಟೆಲ್‌ನ ಸುಖ ನೀಡುತ್ತದೆ. ಬಿಸಿ ಗಾಳಿಗೆ ಮೈಯೆಲ್ಲಾ ಉರಿಯುತ್ತಿದ್ದರೂ, ಕೆಲಸದ ಮಧ್ಯೆ ಸಿಗುವ ಒಂದೆರಡು ನಿಮಿಷದ ವಿರಾಮವೇ ಇವರಿಗೆ ಪರಮಾನಂದ. ಬಣ್ಣದ ಲೋಕದ ಮಂಗಳೂರಿನ ಅಸಲಿ ಮುಖ ಇದು. ಇಲ್ಲಿನ ಭವ್ಯ ಕಟ್ಟಡಗಳ ಹಿಂದೆ, ಸುಂದರ ರಸ್ತೆಗಳ ಹಿಂದೆ ಇಂತಹ ಸಾವಿರಾರು ಕಾರ್ಮಿಕರ ಬೆವರಿದೆ, ರಕ್ತವಿದೆ ಮತ್ತು ಬಿಸಿಲಿಗೆ ಸುಟ್ಟು ಕರಕಲಾದ ಕನಸುಗಳಿವೆ.