ಮಂಗಳೂರು: ನಗರದ ಐತಿಹಾಸಿಕ ಹಿನ್ನೆಲೆಯುಳ್ಳ ಅತ್ತಾವರ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಏಪ್ರಿಲ್ 19ರಿಂದ 23ರ ತನಕ ಬ್ರಹ್ಮಕಲಶೋತ್ಸವ ಮತ್ತು ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಜರುಗಲಿವೆ ಎಂದು ಶ್ರೀ ಅಯ್ಯಪ್ಪ ಭಕ್ತ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೂರಜ್ ರಾಘವನ್ ತಿಳಿಸಿದ್ದಾರೆ.


ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಗಳೂರಿನ ಮೊದಲ ಅಯ್ಯಪ್ಪ ದೇವಸ್ಥಾನ ಎಂಬ ಹೆಗ್ಗಳಿಕೆಯ ಈ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಗರ್ಭಗೃಹದಲ್ಲಿ ಪ್ರತಿಷ್ಠಾಪನಾ ಬ್ರಹ್ಮಕಲಶಾಭಿಷೇಕವು ನಡೆಯಲಿದೆ. ಏಪ್ರಿಲ್ 19ರಂದು ಮಂಗಳಾದೇವಿ ದೇವಸ್ಥಾನದಿಂದ ದೇವಳಕ್ಕೆ ಭವ್ಯ ಹೊರೆಕಾಣಿಕೆ ಮೆರವಣಿಗೆಯೊಂದಿಗೆ ಉತ್ಸವಕ್ಕೆ ಚಾಲನೆ ಸಿಗಲಿದೆ ಎಂದು ವಿವರಿಸಿದರು.

ಉತ್ಸವದ ವಿವಿಧ ದಿನಗಳಲ್ಲಿ ರಾಜ್ಯದ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಏಪ್ರಿಲ್ 20ರಂದು ನಡೆಯುವ ಧಾರ್ಮಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್, ಶಾಸಕ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಅಲ್ಲದೆ, ಪಂದಳ ರಾಜವಂಶಸ್ಥರಾದ ಶ್ರೀ ನಾರಾಯಣ ವರ್ಮ ತಂಬುರಾನ್ ಅವರ ದಿವ್ಯ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ ಎಂದು ಸೂರಜ್ ರಾಘವನ್ ಮಾಹಿತಿ ನೀಡಿದರು.

ಸಾಂಸ್ಕೃತಿಕ ವೈವಿಧ್ಯ ಮತ್ತು ಯಕ್ಷಗಾನ:
ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಏಪ್ರಿಲ್ 20ರಂದು ‘ಅಂಬುರುಹ’ ಯಕ್ಷಗಾನ ಕಲಾಕೇಂದ್ರದಿಂದ ಯಕ್ಷಗಾನ ಬಯಲಾಟ, ಏಪ್ರಿಲ್ 21ರಂದು ‘ಎನ್ನನೇ ಕಥೆ’ ಎಂಬ ತುಳು ಹಾಸ್ಯ ನಾಟಕ ಹಾಗೂ ಏಪ್ರಿಲ್ 22ರಂದು ಖ್ಯಾತ ಗಾಯಕ ರಮೇಶ್ಚಂದ್ರ ಅವರಿಂದ ಸಂಗೀತ ರಸಮಂಜರಿ ಮತ್ತು ವೇಣುವಾದನ ಕಾರ್ಯಕ್ರಮಗಳು ಜರುಗಲಿವೆ.

ಬ್ರಹ್ಮಕಲಶೋತ್ಸವದ ಪ್ರಮುಖ ದಿನವಾದ ಏಪ್ರಿಲ್ 23ರಂದು ಮಧ್ಯಾಹ್ನ ಭಕ್ತಾದಿಗಳಿಗೆ ವಿಶೇಷ ಅನ್ನಸಂತರ್ಪಣೆ ನಡೆಯಲಿದೆ. ಈ ಎಲ್ಲಾ ಪುಣ್ಯ ಕಾರ್ಯಕ್ರಮಗಳಲ್ಲಿ ಮಂಗಳೂರಿನ ನಾಗರಿಕರು ಮತ್ತು ಅಯ್ಯಪ್ಪ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಹಾಗೂ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷರು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಮುರಳಿಧರ್, ಗೋಕುಲದಾಸ್, ರಾಜರತ್ನ ಸುನಿಲ್, ಜನಾರ್ದನ ಅತ್ತಾವರ, ಸೂರ್ಯಕಾಂತ್ ಹಾಗೂ ಡಾ. ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು.